

ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ದೊಂಬರಹಳ್ಳಿ ಗ್ರಾಮದಲ್ಲಿ ನಿಯಮಬಾಹಿರವಾಗಿ ಹೊಸ ಹೋಟೆಲ್ ಮತ್ತು ವಸತಿ ಗೃಹ(ಸಿಎಲ್7) ಮಂಜೂರಾತಿ ನೀಡಲು ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಮುಂದಾಗಿದ್ದಾರೆ.
ಅಬಕಾರಿ ನಿಯಮ 5ರಂತೆ ಮದ್ಯದಂಗಡಿಗೆ ಅನುಮತಿ ನೀಡುವ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಯಾವುದೇ ಧಾರ್ಮಿಕ ಕೇಂದ್ರಗಳು, ಸರ್ಕಾರಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಚೇರಿ ಅಥವಾ ಸ್ಥಳೀಯ ಸಂಸ್ಥೆಗಳ ಕಾರ್ಯಾಲಯ, ವಸತಿ ಪ್ರದೇಶಗಳು, ಪರಿಶಿಷ್ಟ ಜಾತಿ(ಎಸ್ಸಿ) ಪರಿಶಿಷ್ಟ ಪಂಗಡ (ಎಸ್ಟಿ) ಕಾಲನಿ ಇರುವಂತಿಲ್ಲ. ಅಲ್ಲದೆ, ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯಿಂದ 220 ಮೀಟರ್ ವ್ಯಾಪ್ತಿಯಲ್ಲಿ ಇರಬಾರದೆಂಬ ನಿಯಮವಿದೆ.
ಆದರೆ, ಸಿಎಲ್7 ಮದ್ಯದಂಗಡಿ ಆರಂಭಿಸುವ ಜಾಗದಿಂದ 40 ಮೀಟರ್ ದೂರದಲ್ಲಿ ಸರ್ಕಾರಿ ಶಾಲೆ ಇದೆ. ಈ ಗ್ರಾಮ ವಸತಿ ಪ್ರದೇಶವಾಗಿದೆ. ಕಟ್ಟಡಕ್ಕೆ ಅನುಮೋದಿತ ನಕ್ಷೆಯೂ ಇಲ್ಲ. ಹಿಂದೆ ಇದ್ದಂತಹ ಕೆಂಗೇರಿ ವಲಯದ ಅಬಕಾರಿ ನಿರೀಕ್ಷಕರು ಈ ಜಾಗದಲ್ಲಿ ಸನ್ನದು ನೀಡಲು ತಿರಸ್ಕರಿಸಿದ್ದರು. ಹೀಗಿರುವಾಗ, ಈಗ ಬಂದಿರುವ ಕೆಂಗೇರಿ ವಲಯದ ಅಬಕಾರಿ ನಿರೀಕ್ಷಕರು, ಸಬ್ ಇನ್‌ಸ್ಪೆಕ್ಟರ್, ಮಧ್ಯವರ್ತಿಯೊಂದಿಗೆ ಶಾಮೀಲಾಗಿ ಆ ಜಾಗದಲ್ಲಿ ಸಿಎಲ್-7 ಪರವಾನಗಿ ಮಂಜೂರಾತಿ ಹುನ್ನಾರ ನಡೆಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಅಬಕಾರಿ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಹೊಸ ಸಿಎಲ್7 ಮದ್ಯದಂಗಡಿ ತೆರೆಯಲು ಪರವಾನಗಿ ನೀಡಲಾಗುತ್ತಿದೆ.ಗಲ್ಲಿಗಲ್ಲಿಗಳಲ್ಲಿ ನಾಯಿಕೊಡೆಗಳಂತೆ ಸಿಎಲ್7 ಮದ್ಯದಂಗಡಿಗಳು ತಲೆ ಎತ್ತುತ್ತಿವೆ.ಪ್ರಸಕ್ತ ಸಾಲಿನಲ್ಲಿ ಹೊಸ ಸಿಎಲ್7 ಪರವಾನಗಿ ಕೋರಿ ಸಾವಿರಾರು ಅರ್ಜಿಗಳು ಇಲಾಖೆ ಸಲ್ಲಿಕೆಯಾಗಿವೆ. ಇಲಾಖೆಯಿಂದ ಮದ್ಯದಂಗಡಿಗಳಿಗೆ ಅನುಮತಿ ನೀಡುವಂತೆ ಶಿಫಾರಸ್ಸು ಮಾಡುವ ವೇಳೆ ಕೆಲ ಅಧಿಕಾರಿಗಳು ತಮಗೆ ಬೇಕಾದಂತೆ ನಿಯಮ ತಿರುಚುತ್ತಿರುವ ಬಗ್ಗೆಯೂ ದೂರುಗಳಿವೆ.