

ಹಾಸನ: ಪೋಕ್ಸೋ ಕಾಯ್ದೆ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸುವಂತೆ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಪೋಕ್ಸೋ ಸಮಿತಿ ಮತ್ತು ಜಿಲ್ಲಾ ಮಟ್ಟದ ಬಾಲನ್ಯಾಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸಂಕಷ್ಟಕ್ಕೆ ಸಿಲುಕುವವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ಆಗಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಚಾರ ಆದರೆ ಜನರಲ್ಲಿ ಸ್ಪಲ್ಪ ಭಯ ಬರುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಸಾಧ್ಯವಾಗುತ್ತದೆ. ವೃತ್ತಿಗೆ ದ್ರೋಹ ಮಾಡಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಪೋಕ್ಸೋ ಪ್ರಕರಣಗಳನ್ನು ಕಡಿಮೆ ಮಾಡಲು ಎಲ್ಲರ ಪ್ರಯತ್ನ ಅಗತ್ಯ. ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸಬೇಕು. ಸುಶಿಕ್ಷಿತ ಸಂಸ್ಕಾರವನ್ನು, ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಇಲ್ಲವಾದಲ್ಲಿ ಮಕ್ಕಳಲ್ಲಿ ಅಪರಾಧದ ಸಂಖ್ಯೆ ಹೆಚ್ಚಳವಾಗುವುದು. ಈ ಬಗ್ಗೆ ಪಾಲಕರು, ಶಿಕ್ಷಕರು, ಸಮುದಾಯ, ಸಮಾಜ ಎಲ್ಲರೂ ಒಂದಾಗಿ ಶ್ರಮಿಸಬೇಕು. ಜತೆಗೆ ಮಕ್ಕಳಲ್ಲಿ ಅಪರಾಧ ಪ್ರಜ್ಞೆ ಬೆಳೆಯದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಪೋಕ್ಸೋ ಸಮಿತಿ ಮತ್ತು ಬಾಲನ್ಯಾಯ ಸಮಿತಿ ರಚಿಸಲಾಗಿದೆ. ಅದರನ್ವಯ ಪ್ರತಿ ತಿಂಗಳು ಇದಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್‌ಪಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸಮಗ್ರ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಲ್ಲರ ಸಮನ್ವಯದೊಂದಿಗೆ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ನ್ಯಾಯಾಲಯಗಳು ಕೇವಲ ಪ್ರಕರಣಗಳಲ್ಲಿ ವಿಚಾರಣೆ ನಡೆಸಿ ತೀರ್ಪು ನಡೆಸಲಷ್ಟೇ ಸೀಮಿತವಾಗದೆ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಜಿಲ್ಲಾ ಮಟ್ಟದ ಅನುಪಾಲನಾ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸುವ ಮೂಲಕ ಮಕ್ಕಳಿಗೆ ಸಂರಕ್ಷಣೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪೋಕ್ಸೋದಂತಹ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಪ್ರತಿ ಜಿಲ್ಲೆಯಲ್ಲೂ ಶೀಘ್ರ ವಿಲೇವಾರಿ ನ್ಯಾಯಾಲಯಗಳನ್ನು ತೆರೆಯಲಾಗಿದೆ. ಪ್ರತಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಅವಧಿಯನ್ನು ನಿಗದಿಗೊಳಿಸಿದ್ದು, ಅಪರಾಧ ರುಜುವಾತಾದ ಪ್ರಕರಣಗಳಲ್ಲಿ ಕಾಯ್ದೆಯನುಸಾರ ಶಿಕ್ಷೆಯನ್ನು ನೀಡಲಾಗುತ್ತಿದೆ ಎಂದು ಅಧಿಕ ಜಿಲ್ಲಾ ನ್ಯಾಯಾಧೀಶರಾದ ಎಚ್.ಎಂ.ದೇವರಾಜು ತಿಳಿಸಿದರು.
ಬಾಲನ್ಯಾಯ ಮಂಡಳಿಯಲ್ಲಿ ಸಂಘರ್ಷಕ್ಕೊಳಗಾದ ಮಕ್ಕಳಿಗೆ ಅಪರಾಧಿ ಮನೋಭಾವ ಬೆಳೆಯದಂತೆ ಮನೆಯ ವಾತಾವರಣವನ್ನು ಕಲ್ಪಿಸಿಕೊಟ್ಟು ಅವರನ್ನು ಉತ್ತಮ ಪ್ರಜೆಗಳಾಗುವಂತೆ ರೂಪಿಸಲಾಗುವುದು. ಅಲ್ಲದೆ ಶೀಘ್ರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಬಾಲನ್ಯಾಯ ಮಂಡಳಿ ಅಧ್ಯಕ್ಷರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಿರಿಗೌಡ ತಿಳಿಸಿದರು.
ಪ್ರತಿ ಮಾಹೆಯಾನ ನಡೆಯುವ ಸಭೆಯಲ್ಲಿ ಕೇವಲ ಅಂಕಿ-ಅಂಶಗಳನ್ನು ಪರಿಶೀಲಿಸದೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಲ್ಲಿ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ನೀಡಲಾಗುತ್ತಿದ್ದು, ಕಾನೂನು ನೆರವು ಅಭಿರಕ್ಷರನ್ನು ಇದಕ್ಕಾಗಿ ನೇಮಿಸಿಕೊಳ್ಳಲಾಗಿದೆ. ಪ್ರತಿ ಶಾಲಾ, ಕಾಲೇಜುಗಳಲ್ಲಿ ನಿರಂತರವಾಗಿ ಪೋಕ್ಸೋ ಕಾಯ್ದೆ ಮಕ್ಕಳ ಅಪರಾಧಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ನಡೆಸುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯರ್ಶಿ ಜಿ.ಕೆ.ದಾಕ್ಷಾಯಿಣಿ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದಿಲೀಪ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ಎಸ್.ಮಧುಕುಮಾರಿ ಇತರರಿದ್ದರು.