

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಇನ್ನಷ್ಟು ದಿನ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯಲ್ಲಿ ಏ.20ರಿಂದ ಏ.21ರವರೆಗೆ ಆಲಿಕಲ್ಲು ಸಹಿತ ವರ್ಷಧಾರೆಯಾಗುವ ಸಾಧ್ಯತೆ ಇದೆ.
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯ ಆಯ್ದ ಸ್ಥಳಗಳಲ್ಲಿ ಏ.21ರಂದು ಮಳೆಯಾಗಲಿದೆ. ಬಳಿಕ, ಏ.24ರಿಂದ ಏ.26ರವರೆಗೆ ದಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಒಣಹವೆ ಮುಂದುವರಿದರೆ, ಏ.27ರಿಂದ ಮೇಲಿನ ಭಾಗಗಳಲ್ಲಿ ಮತ್ತೆ ಮಳೆಯಾಗಲಿದೆ. ಈ ವೇಳೆ ಕೆಲವೊಂದು ಸ್ಥಳಗಳಲ್ಲಿ ಬಲವಾದ ಗಾಳಿಯೂ ಬೀಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕೆಲವೆಡೆ ತಾಪಮಾನ ಏರಿಳಿತ: ಕರಾವಳಿ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ವಾತಾವರಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉತ್ತರ ಕರ್ನಾಟಕದಲ್ಲಿಯೂ ಮುಂದಿನ 2 ದಿನ ಮಾತ್ರ ಬದಲಾವಣೆ ಇರುವುದಿಲ್ಲ. ಆದರೆ, ನಂತರದ ದಿನಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿ.ಸೆ.ಏರಿಕೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 33 ಮತ್ತು 22 ಡಿ.ಸೆ. ಇರಲಿದೆ.