ರಾಜ್ಯದಲ್ಲಿ ಇನ್ನಷ್ಟು ದಿನ ಪೂರ್ವ ಮುಂಗಾರು ಮಳೆ: ಹವಾಮಾನ ಇಲಾಖೆ ಮೂನ್ಸೂಚನೆ

Rain_cloud
Published on

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮದಿಂದ ಬೆಂಗಳೂರು ನಗರ ಸೇರಿ ರಾಜ್ಯದ ಹಲವೆಡೆ ಭಾನುವಾರವೂ ಉತ್ತಮ ಮಳೆ ಸುರಿದಿದೆ. ತುಮಕೂರಿನ ತಿಪಟೂರು, ದಕ್ಷಿಣ ಕನ್ನಡದ ಮಣಿ, ಧರ್ಮಸ್ಥಳ, ಪುತ್ತೂರು, ಬೆಳ್ತಂಗಡಿ, ಹಾಸನದ ಬೇಲೂರು, ಬೆಂಗಳೂರಿನ ಹೆಸರಟ್ಟ ಸೇರಿ ವಿವಿಧ ಪ್ರದೇಶಗಳಲ್ಲಿ ಪೂರ್ವ ಮುಂಗಾರು ವರ್ಷಧಾರೆಯಾಗಿತ್ತು.

ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿಯಲ್ಲಿ ಏ.21ರಿಂದ ಏ.24ರವರೆಗೆ ಹಾಗೂ ಬೆಳಗಾವಿ, ಬಳ್ಳಾರಿ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರದಲ್ಲಿ ಏ.21ರಂದು ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಲಿದೆ. ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಏ.26ರಿಂದ ಮುಂದಿನ 2 ದಿನ ಬಿರುಸಾಗಿ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

ರಾಜ್ಯದಲ್ಲೇ ಕಲಬುರಗಿಯಲ್ಲಿ ಅತಿ ಹೆಚ್ಚು 41.2 ಡಿ.ಸೆ.ಉಷ್ಣಾಂಶ ದಾಖಲಾಗಿದ್ದು, ವಾಡಿಕೆಗಿಂತ 3 ಡಿ.ಸೆ.ಅಧಿಕವಾಗಿದೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ಬೆಳಗಾವಿ, ದಾವಣಗೆರೆ, ಗದಗದಲ್ಲಿ ವಾಡಿಕೆಗಿಂತ 1-2 ಡಿ.ಸೆ. ಅಧಿಕವಾಗಿದೆ. ದಕ್ಷಿಣ ಕರ್ನಾಟಕ ಮತ್ತು ಕರಾವಳಿಯಲ್ಲಿ ಮುಂದಿನ 5 ದಿನ ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉತ್ತರ ಕರ್ನಾಟಕದ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿ.ಸೆ. ಉಷ್ಣಾಂಶ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 33 ಮತ್ತು 22 ಡಿ.ಸೆ. ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net