ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ

ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ
Published on

ನಂಜನಗೂಡು: ಒಂದು ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಅರ್ಜಿ ಕೊಟ್ಟಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣ ಮಾಡಿಕೊಡಲಾಗುವುದೆಂದು ಶಾಸಕ ದರ್ಶನ್‌ಧ್ರುವನಾರಾಯಣ ಹೇಳಿದರು.

ಪಟ್ಟಣದ ಶ್ರೀಕಂಠೇಶ್ವರ ದಾಸೋಹ ಭವನದ ಆವರಣದಲ್ಲಿ ಶನಿವಾರ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. 21ನೇ ಶತಮಾನದ ಪರಿಸ್ಥಿತಿಯಲ್ಲಿ ನಾವು ಸಮಾಜಕ್ಕೆ ಶಕ್ತಿ ತುಂಬುವ ಬಗ್ಗೆ ಚಿಂತನೆಯನ್ನು ಮಾಡಬೇಕಾಗುತ್ತದೆ. ನಮ್ಮ ತಾಲೂಕಿನಲ್ಲಿ ಈ ಸಮಾಜದ ಜನಸಂಖ್ಯೆ ಕಡಿಮೆ ಇರಬಹುದು. ಆದರೂ ಕೂಡ ನಿಮ್ಮನ್ನ ಗುರುತಿಸಿ, ರಾಜಕೀಯ ಸ್ಥಾನಮಾನ ಸೇರಿದಂತೆ ಸಮಾಜದ ಕೆಲಸ ಕಾರ್ಯಗಳನ್ನು, ತಮ್ಮ ಹಕ್ಕುಗಳನ್ನು ಸಂವಿಧಾನದ ಅಡಿಯಲ್ಲಿ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಡಾ.ಯತಿಂದ್ರ ಸಿದ್ದರಾಮಯ್ಯ ಮಾತನಾಡಿ, 2017ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದಾಗ, ಸಣ್ಣ-ಸಣ್ಣ ಸಮುದಾಯಗಳ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಕಾರಣ ಸಮಾಜ ಸಣ್ಣದಾದರೂ ಅದರಲ್ಲಿರುವ ಮಹಾನ್ ವ್ಯಕ್ತಿಗಳ ಬಗ್ಗೆ ಸಮುದಾಯಗಳಿಗೆ ಪರಿಚಯ ಮಾಡಿಕೊಡಬೇಕಿತ್ತು. ಅವರ ಆದರ್ಶ ಮತ್ತು ಅವರ ಜೀವನ ಚರಿತ್ರೆಯನ್ನು ಸಮುದಾಯಗಳಿಗೆ ಪರಿಚಯಿಸುವ ಅಗತ್ಯವಿತ್ತು. ಸಣ್ಣ ಸಮುದಾಯಗಳನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಎಲ್ಲಾ ರಂಗದಲ್ಲೂ ಅವರನ್ನು ಮೇಲೆತ್ತುವ ಸಲುವಾಗಿ ಸಿದ್ದರಾಮಯ್ಯನವರು ಮಹಾನ್ ವ್ಯಕ್ತಿಗಳ ಜಯಂತ್ಯುತ್ಸವವನ್ನು ಆಚರಿಸಲು ತೀರ್ಮಾನಿಸಿದರು ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಜೂನಿಯರ್ ಕಾಲೇಜು ಅವರಣದಲ್ಲಿ ಆನಂದ್ ಗುರೂಜಿಯವರು ಬೆಳ್ಳಿ ರಥದಲ್ಲಿ ಬೃಹತ್ ಶ್ರೀ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಜೂನಿಯರ್ ಕಾಲೇಜಿನಿಂದ ಹೊರಟು ಆರ್‌ಪಿ ರಸ್ತೆಯ ಮುಖಾಂತರ ದೇವಾಲಯದ ಆವರಣ ತಲುಪಿತು.

ಬಳಿಕ ಮಾತನಾಡಿದ ಆನಂದ್ ಗುರೂಜಿ, ಮಾಘ ಮಾಸದಲ್ಲಿ ನಾನು ಶ್ರೀ ಕಂಠೇಶ್ವರನ ಸನ್ನಿಧಿಗೆ ಬಂದಿರುವುದು ನನ್ನ ಪುಣ್ಯ, ಆತನ ದರ್ಶನ ಪಡೆದು ನಾನು ಪುನೀತನಾದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ಹೋಗಲು ಸಾಧ್ಯವಾಗದೆ ಇರುವವರು ಬೆಂಗಳೂರಿನನಲ್ಲಿ ಇರುವ ನನ್ನ ಆಶ್ರಮಕ್ಕೆ ಬಂದರೆ ಪ್ರಯಾಗರಾಜ್ ನಿಂದ ತಂದ ತೀರ್ಥದಿಂದ ನೀವು ಸಹ ಪುಣ್ಯ ಸ್ನಾನ ಮಾಡಬಹುದು ಎಂದು ಹೇಳಿದರು.

ತಹಸೀಲ್ದಾರ್ ಶಿವಕುಮಾರ ಕಾಸನೂರು, ಕಳಲೆ ಕೇಶವಮೂರ್ತಿ, ಎಚ್.ಡಿ. ಪ್ರಸನ್ನಕುಮಾರ್, ನಗರಸಭಾ ಸದಸ್ಯರು ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಂ. ಬಸವರಾಜ್, ಗೌರವಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಮಹೇಶ್, ರವಿ, ಖಜಾಂಚಿ ಸೋಮಣ್ಣ, ಸಹ ಕಾರ್ಯದರ್ಶಿ ನಾಗರಾಜ್, ಸಂಚಾಲಕ ಮಾದೇವಸ್ವಾಮಿ, ಪ್ರಭು, ಶಿವಕುಮಾರ್, ವೆಂಕಟೇಶ್, ಬಸವರಾಜ್, ಬೈರ, ಸಂಜು, ಕೋಣನೂರು ಬಸವರಾಜು, ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net