ಕೌಟುಂಬಿಕ ವ್ಯವಸ್ಥೆಯಲ್ಲಿ ನಂಬಿಕೆಗೆ ಹೆಚ್ಚು ಒತ್ತು

IMG_20230928_115232
ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಾಹಿತ್ಯಾಸಕ್ತ ಬಂಧುಗಳ ವೇದಿಕೆಯಿಂದ ಆಯೋಜಿಸಿದ್ದ ಮಾಸದ ನೆನಪು ಕಾರ್ಯಕ್ರಮದಲ್ಲಿ ಸಾಹಿತಿ ಶಾಂತಾ ಅತ್ನಿ ಅವರು ಪ್ರೇಮಾ ಪ್ರಶಾಂತ್ ಅವರ ಸಂಸ್ಕಾರ ಕೃತಿ ಬಿಡುಗಡೆ ಮಾಡಿದರು. ಡಾ.ಬಿ.ಆರ್.ಯುವರಾಜ್, ರಾಜ್‌ಭಾನ್, ಜಯಂತಿ ಚಂದ್ರಶೇಖರ್, ಮಾರೇನಹಳ್ಳಿ ಲೋಕೇಶ್, ಪ್ರೇಮಾ ಪ್ರಶಾಂತ್ ಇದ್ದರು.
Published on

ಶ್ರವಣಬೆಳಗೊಳ: ಮಾನವೀಯತೆಯೇ ಕ್ಷೀಣಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪಕ್ಕೆ ತರುವುದು ಬಹಳ ಮಹತ್ವದ ಕೆಲಸ ಎಂದು ಸಾಹಿತಿ ಶಾಂತಾ ಅತ್ನಿ ಹೇಳಿದರು.

ಶ್ರವಣಬೆಳಗೊಳ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಸಾಹಿತ್ಯಾಸಕ್ತ ಬಂಧುಗಳ ವೇದಿಕೆ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ 17ನೇ ಮಾಸದ ನೆನಪು ಕಾರ್ಯಕ್ರಮದಲ್ಲಿ ’ಸಂಸ್ಕಾರ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಭಾರತೀಯ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಕೌಟುಂಬಿಕ ನಂಬಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಕುಟುಂಬದಲ್ಲಿ ಬಾಲ್ಯದಿಂದಲೇ ಮಗುವಿಗೆ ಸಂಸ್ಕಾರ ನೀಡಿದರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಶ್ರವಣಬೆಳಗೊಳದ ಲೇಖಕಿ ಪ್ರೇಮಾ ಪ್ರಶಾಂತ್ ಅವರ ಸಂಸ್ಕಾರ ಕೃತಿಯಲ್ಲಿ ಬದುಕಿನ ಸಂಸ್ಕಾರದ ಬಗ್ಗೆ ವ್ಯಾಖ್ಯಾನ ಮಾಡಲಾಗಿದ್ದು, ಮನುಷ್ಯನ ಸಾಧನೆಗೆ ಸಂಸ್ಕಾರ ಅತ್ಯವಶ್ಯಕವಾಗಿದೆ ಎಂಬ ಸಂವೇದನಾಶೀಲ ಲೇಖನಗಳು ನಿರೂಪಣೆಗೊಂಡಿವೆ. ಮಕ್ಕಳ ಸಾಹಿತ್ಯ, ಪುರುಷರ ಜಾಗತಿಕ ಸಮಸ್ಯೆಗಳು, ಸಾಮಾಜಿಕ ಜೀವನ ಪದ್ಧತಿ, ಮಹನೀಯರ ಆದರ್ಶ ಮೌಲ್ಯಗಳ ಉಲ್ಲೇಖಿತ ಲೇಖನಗಳು ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತವೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಬಿ.ಆರ್.ಯುವರಾಜ್ ಮಾತನಾಡಿ, ಸಾಹಿತ್ಯಾಸಕ್ತ ಬಂಧುಗಳು ವೇದಿಕೆಯಿಂದ ಪ್ರತಿ ತಿಂಗಳು ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದರಿಂದ ಇಂದಿನ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ. ಇದು ಪ್ರೇಮ ಪ್ರಶಾಂತ್ ಅವರಂತಹ ಯುವ ಬರಹಗಾರರ ಸಂವೇದನಾಶೀಲ ಬರವಣಿಗೆಗೆ ಸ್ಫೂರ್ತಿಯಾಗಿ 3 ಕೃತಿಗಳನ್ನು ರಚಿಸಲು ಸಾಕಾರವಾಗಿದೆ ಎಂದರು.

ನಿವೃತ್ತ ಶಿಕ್ಷಕ ರಾಜ್‌ಭಾನ್ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು. ಮಕ್ಕಳ ಸಾಹಿತಿ ಮಾರೇನಹಳ್ಳಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಆಸಕ್ತ ಕವಿಗಳಿಂದ ಗುರು-ಶಿಷ್ಯ ಪರಿಕಲ್ಪನೆಯ ಕವಿಗೋಷ್ಠಿ ನಡೆಯಿತು. ಹಿರಿಯ ಪತ್ರಕರ್ತ ಗೋಕಾಕ್ ಪುಟ್ಟಣ್ಣ, ಸಾಹಿತಿಗಳಾದ ಜಯಂತಿ ಚಂದ್ರಶೇಖರ್, ಪ್ರೇಮಾ ಪ್ರಶಾಂತ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net