

* ಚನ್ನಪಟ್ಟಣದ ಆವರ್ತಪುರ ಬಡಾವಣೆಯಲ್ಲಿ ನೀರಿನ ಸಮಸ್ಯೆ
* ಕೆಲವೆಡೆ ರಸ್ತೆ ಮರು ಡಾಂಬರೀಕರಣ, ಚರಂಡಿ ನಿರ್ಮಾಣಕ್ಕೆ ಬೇಡಿಕೆ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬೆಂಗಳೂರು-ಮೈಸೂರು ಹೆದ್ದಾರಿಗೆ ಅಂಟಿಕೊಂಡಂತಿರುವ 6ನೇ ವಾರ್ಡ್ ನಗರದ ಪ್ರತಿಷ್ಠಿತ ವಾರ್ಡ್‌ಗಳಲ್ಲೊಂದು. ಮೂಲ ಸವಲತ್ತುಗಳಿಗೆ ಕೊರತೆ ಇಲ್ಲದಿದ್ದರೂ ಈ ವಾರ್ಡ್‌ನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಿದೆ.
ಹೌದು, ಚರ್ಚ್ ರಸ್ತೆ ಎಂದೇ ಹೆಸರುಗಳಿಸಿರುವ ಈ ವಾರ್ಡ್‌ನಲಿ ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ಕಂಡರೂ, ಇಲ್ಲಿ ಒಂದು ಸುತ್ತು ಬಂದರೆ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂಬುದು ಕಂಡುಬರುತ್ತದೆ. ವಾರ್ಡ್ ವ್ಯಾಪ್ತಿಯ ಆವರ್ತಪುರ ಬಡಾವಣೆಯಲ್ಲಿ ಕೊಂಚ ನೀರಿನ ಸಮಸ್ಯೆ ಹೊರತುಪಡಿಸಿದರೆ, ಕುಡಿಯುವ ನೀರಿನ ಸಮಸ್ಯೆ ಇಲ್ಲಿಲ್ಲ. ಕೆಲವೆಡೆ ರಸ್ತೆ ಮರು ಡಾಂಬರೀಕರಣ ಹಾಗೂ ಚರಂಡಿಗಳ ನಿರ್ಮಾಣವಾಗಬೇಕಿದೆ.
ವಾರ್ಡ್‌ನಲ್ಲಿರುವ ಕನ್ಸರ್ವೆನ್ಸಿ ಗಲ್ಲಿಯೊಂದನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸುವ ಕೆಲಸವಾಗಬೇಕಿದೆ. ವಾರ್ಡ್ ಸದಸ್ಯೆ ಕಮಲಾರಾಮು ಎರಡನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಈ ಹಿಂದೆ ನಗರಸಭೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಪತಿ ರಾಮು ಈ ಹಿಂದೆ ವಾರ್ಡನ್ನು ಪ್ರತಿನಿಧಿಸಿದ್ದರು. ಪ್ರಸುತ್ತ ಮೂರು ಅವಧಿಯಲ್ಲೂ ಇವರ ಕುಟುಂಬವೇ ಈ ವಾರ್ಡ್ ಪ್ರತಿನಿಧಿಸುತ್ತಿರುವುದು ವಿಶೇಷ. ಇಲ್ಲಿರುವ ಕೋದಂಡರಾಮಸ್ವಾಮಿ ದೇವಸ್ಥಾನ ಬಹಳ ಪ್ರಸಿದ್ಧಿ ಇದೆ. ಚರ್ಚ್ ಸ್ಕೂಲ್ ಎಂದೇ ಹೆಸರಾಗಿರುವ ಶಿಕ್ಷಣ ಸಂಸ್ಥೆಗಳು ಇಲ್ಲಿರುವುದು ವಿಶೇಷ.
* ಕೆಲ ರಸ್ತೆ ಹಾಗೂ ಚರಂಡಿಗಳ ನಿರ್ಮಾಣ
* ಚರಂಡಿಗಳಲ್ಲಿ ತುಂಬಿರುವ ಹೂಳೆತ್ತುವ ಜತೆಗೆ, ಕೆಲವೆಡೆ ಚರಂಡಿಗಳ ಮೇಲ್ಛಾವಣಿ (ಸ್ಲ್ಯಾಬ್) ನಿರ್ಮಾಣವಾಗಬೇಕು.
* ಅನುಮೋದನೆಯಾಗಿರುವ ಅಂಗನವಾಡಿ ಕೇಂದ್ರ ಕಾರ್ಯಾರಂಭ ಮಾಡಬೇಕಿದೆ.
* ಓತ್ತುವರಿಯಾಗಿರುವ ಕನ್ಸರ್ವೆನ್ಸಿ ಗಲ್ಲಿ ತೆರವು ಹಾಗೂ ಅಭಿವೃದ್ಧಿ ಕಾಮಗಾರಿ
* ರಸ್ತೆಗಳಲ್ಲಿರುವ ಗುಂಡಿ ಮುಚ್ಚುವ (ಪ್ಯಾಚ್‌ವರ್ಕ್) ಕೆಲಸ ಹಾಗೂ ರಸ್ತೆಗಳ ಮರು ಡಾಂಬರೀಕರಣವಾಗಬೇಕು.
* ಅವರ್ತಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕಿದೆ.
ವಾರ್ಡ್ ನಂ 6
ಸದಸ್ಯೆ, ಕಮಲಾರಾಮು (ಬಿಜೆಪಿ)
ಜನಸಂಖ್ಯೆ 3000
ವಾರ್ಡ್ ವ್ಯಾಪ್ತಿ!
ಚರ್ಚ್ ರಸ್ತೆ, ಪೊಲೀಸ್ ವಸತಿಗೃಹ, ಆವರ್ತಪುರ, ಕೋದಂಡರಾಮ ಬಡಾವಣೆ, ಎಚ್.ಪಿ. ಕ್ವಾಟರ್ಸ್, ಚರ್ಚ್ ರಸ್ತೆ ಬಲಭಾಗ,
ಕಮಲಾ ರಾಮು, ವಾರ್ಡ್ ಸದಸ್ಯೆ
ರವಿ, ವಾರ್ಡ್ ನಿವಾಸಿ