ಮೋರನಹಳ್ಳಿ ದುರ್ಗಾದೇವಿ ರಥೋತ್ಸವ ಇಂದು

ಮೋರನಹಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಹೊರನೋಟ.
ಮೋರನಹಳ್ಳಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಹೊರನೋಟ.
Published on

ಅಳವಂಡಿ: ಕೊಪ್ಪಳ ತಾಲೂಕಿನ ಮೋರನಹಳ್ಳಿ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೋತ್ಸವ ನಿಮಿತ್ತ ಮಂಗಳವಾರ ಬೆಳಗ್ಗೆ ಶ್ರೀಮಾತೆಗೆ ವಿಶೇಷ ಪೂಜೆ, ಉಡಿ ತುಂಬುವುದು, ಪುಷ್ಪಾಲಂಕಾರ ಸೇವೆ, ಸಂಜೆ ಜನಪದವಾದ್ಯ ಮೇಳದೊಂದಿಗೆ ಲಘು ರಥೋತ್ಸವ (ಉಚ್ಚಾಯ) ಅದ್ದೂರಿಯಾಗಿ ಜರುಗಿತು.

ಏ.10ರವರೆಗೆ ಜಾತ್ರೆ ಜರುಗಲಿದ್ದು, ಈ ನಿಮಿತ್ತ ದೇವಸ್ಥಾನವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಏ.9ರ ಬೆಳಗ್ಗೆ ಮಹಿಳೆಯರ ಕಳಸ, ಕುಂಭ, ಡೊಳ್ಳಿನ ಮೇಳ, ಕೋಲಾಟ ಹಾಗೂ ಜನಪದ ವಾದ್ಯಮೇಳದೊಂದಿಗೆ ದೇವಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಗಂಗಾಸ್ಥಳಕ್ಕೆ ತೆರಳಲಿದೆ. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ದೇವಿಯ ಜಾಂಡಾ ಲಿಲಾವ ಕಾರ್ಯಕ್ರಮ ನಡೆಯಲಿದೆ. ನಂತರ ಶ್ರೀ ದುರ್ಗಾದೇವಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಏ.10ರಂದು ಶ್ರೀ ದೇವಿಗೆ ವಿಶೇಷ ಪೂಜೆ, ನೇವೇದ್ಯ ಅರ್ಪಣೆ, ಉಡಿ ತುಂಬುವ ಕಾರ್ಯ ನಡೆಯಲಿದೆ. ರಾತ್ರಿ ಕಡುಬಿನ ಕಾಳಗ, ಮದ್ದು ಸುಡುವುದು ಹಾಗೂ ಅನ್ನ ಸಂತರ್ಪಣೆ ಸೇವೆ ಜರುಗಲಿದೆ.

ನಾಟಕ ಪ್ರದರ್ಶನ: ಜಾತ್ರೋತ್ಸವ ನಿಮಿತ್ತ ಗ್ರಾಮದ ಶ್ರೀ ಗುರುಬಸವೇಶ್ವರ ನಾಟ್ಯ ಸಂಘದಿಂದ ‘ಸೇಡಿಗಾಗಿ ಸಿಡಿದೆದ್ದ ಶಿವನಾಗ’ ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net