ಶ್ರೀಮುರಸಿದ್ದೇಶ್ವರ ಜಾತ್ರೋತ್ಸವ ಸಂಪನ್ನ

3MURAGUNDI1
Published on

ಮುರಗುಂಡಿ: ಗ್ರಾಮದ ಶ್ರೀಮುರಸಿದ್ದೇಶ್ವರ ದೇವರ ಜಾತ್ರೆ ಸಂಭ್ರಮದಿಂದ ಈಚೆಗೆ ಜರುಗಿತು. ಚಿಕ್ಕಟ್ಟಿ, ಕೆರೂರ, ಜಂಬಗಿ, ಶಂಬರಗಿ, ತಂಗಡಿ, ಶಿನಾಳ, ಚಿಕ್ಕೋಡಿ, ಅಥಣಿ ಸೇರಿ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಮಾ.29ರಂದು ಕುದುರೆಯೊಂದಿಗೆ ಹಸಿಬಟ್ಟೆಯಲ್ಲಿ ಮೆರವಣಿಗೆ ಮೂಲಕ ಮುರಸಿದ್ದೇಶ್ವರ ದೇವರನ್ನು ಕರೆತರಲಾಯಿತು. ಮಾ.30ರಂದು ಬೆಳಗ್ಗೆ ಮುರಸಿದ್ದೇಶ್ವರನಿಗೆ ಅಭಿಷೇಕ, ನೈವೇದ್ಯ ಅರ್ಪಿಸಲಾಯಿತು. ಬಳಿಕ ಭಂಡಾರ ಹಾರಿಸಿ, ಡೊಳ್ಳು, ದಟ್ಟಿಕುಣಿತದೊಂದಿಗೆ ಪಲ್ಲಕ್ಕಿ ಹೊತ್ತು ದೇವಸ್ಥಾನ ಪ್ರಾಂಗಣದಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ರಾತ್ರಿ ಶ್ರೀಕೃಷ್ಣ ಪಾರಿಜಾತ ದೊಡ್ಡಾಟ ಪ್ರದರ್ಶನಗೊಂಡಿತು.

ಜಾತ್ರಾ ಕಮಿಟಿಯಿಂದ ಅಚ್ಚುಕಟ್ಟಾಗಿ ನೀರು, ಮಹಾಪ್ರಸಾದ ವ್ಯವಸ್ಥೆ ಕೈಗೊಳ್ಳಲಾಯಿತು. ಸ್ವಚ್ಛತೆ, ಭದ್ರತೆ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ವಿಶೇಷ ವಿದ್ಯುತ್ ದೀಪದ ಅಲಂಕಾರ ಮಾಡಲಾಗಿತ್ತು. ಮಕ್ಕಳ ಆಟಿಕೆ ಸಾಮಾನು, ಬಲೂನು ಅಂಗಡಿ, ತಿರುಗುವ ತೊಟ್ಟಿಲು, ಜಾದು, ಓಡುವ ರೈಲು ಮಕ್ಕಳ ಸಂಭ್ರಮವನ್ನು ಇಮ್ಮಡಿ ಗೊಳಿಸಿದವು. ಬೇಸಿಗೆ ಹಿನ್ನೆಲೆಯಲ್ಲಿ ತಂಪು ಪಾನಿಗಳ ವ್ಯಾಪಾರ ಭರ್ಜರಿಯಾಗಿತ್ತು. ಮುರಸಿದ್ದೇಶ್ವರನ ಜಾತ್ರೆಯ ವಿಶೇಷವಾದ ದೇವರನುಡಿ ಹೇಳುವುದು, ಕವಲು ಹಚ್ಚುವುದು ನಡೆಯಿತು. ಮುರಸಿದ್ದೇಶ್ವರ ದೇವರ ಪುರಪ್ರವೇಶದ

ಬಳಿಕ ಜಾತ್ರೆ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net