‘ಚಂದ್ರನ ಮೇಲೆ ಮಾನವ ಯಾನ’ ಇಸ್ರೋ ಯೋಜನೆ

231
Published on

ದಾವಣಗೆರೆ: ಮುಂಬರುವ 2035ರ ವೇಳೆಗೆ ಮನುಷ್ಯನನ್ನು ಸುರಕ್ಷಿತವಾಗಿ ಚಂದ್ರನ ಮೇಲೆ ಕರೆದೊಯ್ಯುವ ಜತೆಗೆ ವಾಪಸ್ ಕರೆತರುವುದು ಇಸ್ರೋ ಮುಂದಿನ ಯೋಜನೆಯಾಗಿದೆ ಎಂದು ಇಸ್ರೋ ನಿವೃತ್ತ ನಿರ್ದೇಶಕ ಎಚ್.ಡಿ.ಆನಂದ್ ಹೇಳಿದರು.

ನಗರದ ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಬಾಹ್ಯಾಕಾಶ ಯೋಜನೆ 1960 ರಲ್ಲಿ ಶುರುವಾಗಿದ್ದು, ಇಸ್ರೋ ಸ್ಥಾಪನೆಯ ನಂತರ ಆರ್ಯಭಟದಿಂದ ಆದಿತ್ಯ ಎಲ್1 ವರೆಗೆ ಅನೇಕ ಉಪಗ್ರಹ ಉಡಾವಣೆ ಮಾಡಲಾಗಿದೆ. ಚಂದ್ರನ ಮೇಲೆ ಮಾನವನನ್ನು ಕರೆದೊಯ್ಯುವುದು ಇಸ್ರೋ ಮುಂದಿರುವ ಯೋಜನೆಯಾಗಿದ್ದು, ಇದಕ್ಕಾಗಿ ಆವಿಷ್ಕಾರ ನಡೆಯಬೇಕಾಗಿದೆ ಎಂದು ತಿಳಿಸಿದರು.

ಭಾರತ ಸರ್ಕಾರ ಬಾಹ್ಯಾಕಾಶ ವಲಯ ಖಾಸಗೀಕರಣ ಮಾಡಿರುವುದರಿಂದ ಇಸ್ರೋ ಸಂಶೋಧನೆಗೂ ಹೆಚ್ಚು ಒತ್ತು ನೀಡಿದೆ. ಅಲ್ಲದೇ ಬೇರೆ ದೇಶಗಳ ಉಪಗ್ರಹ ಉಡಾವಣೆಗೂ ಸಹಕರಿಸುತ್ತಿದೆ. ಏಷ್ಯಾದಲ್ಲಿ ಒಂದು ದೊಡ್ಡ ಉಪಗ್ರಹ ಜಾಲ ನಿರ್ಮಿಸಲಾಗಿದೆ ಎಂದರು.

ಚಂದ್ರಯಾನ 2, ಮಂಗಳಯಾನ ಹಾಗೂ ಆದಿತ್ಯ ಎಲ್1 ಹಾಗೂ ಇದರ ಜತೆಗೆ ಬೇರೆ ದೇಶಗಳ ಸಾಕಷ್ಟು ವೈಜ್ಞಾನಿಕ ಉಪಗ್ರಹ ಉಡಾವಣೆ ಮಾಡಿ ಅಲ್ಲಿಂದ ದೇಶಕ್ಕೆ ಆರ್ಥಿಕ ಸಂಪನ್ಮೂಲ ಬರುವಂತೆ ಮಾಡಿದೆ. ಇಸ್ರೋ ಕೇಂದ್ರಗಳು ಒಂದು ಕಡೆ ಮಾಡುವ ಕೆಲಸ ಮತ್ತೊಂದು ಕಡೆ ಮಾಡುವುದಿಲ್ಲ ಎಂದು ಹೇಳಿದರು.

ಎಸ್‌ಟಿಜೆ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಎಸ್. ರವಿಕುಮಾರ್ ಮಾತನಾಡಿ, ಇಸ್ರೋ ಮೂಲಕ ಭಾರತಿಯ ವಿಜ್ಞಾನಿಗಳು ಬಾಹ್ಯಾಕಾಶ ವಿಜ್ಞಾನದಲ್ಲಿ ಅನೇಕ ಯಶಸ್ವಿ ಪ್ರಯೋಗ ಮಾಡುತ್ತಿದ್ದು, ಬೇರೆ ದೇಶಗಳಿಗೂ ಮೀರಿ ಉನ್ನತ ಸಾಧನೆ ಕೈಗೊಂಡಿದೆ ಎಂದು ತಿಳಿಸಿದರು.

ಬಿಐಇಟಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್. ಜಗದೀಶ್, ಜಿಪಂ ಯೋಜನಾ ಸಹಾಯಕ ಎ.ಜೆ. ಆನಂದ ಇದ್ದರು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಪಂ ಹಾಗೂ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net