

ಮಂಗಳೂರು: ಭಕ್ತ ಮತ್ತು ಭಗವಂತನ ನಡುವೆ ಸೇತುವೆ ಮತ್ತು ಸಂವಹನ ಮಾಧ್ಯಮವಾಗಿರುವ ಭಜನೆ ಮತ್ತು ಭಜನಾ ಮಂದಿರಗಳು ಭಾರತೀಯ ಸಂಸ್ಕೃತಿಯ ಭಾಗವಾಗಿವೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮಂಗಳೂರು ಮೂಡುಶೆಡ್ಡೆ ಶಿವನಗರದಲ್ಲಿ ಸೋಮವಾರ ಜರುಗಿದ ನೂತನ ಶ್ರೀ ಶಿವಶಕ್ತಿ ಭಜನಾ ಮಂದಿರದ ಶಿಲಾನ್ಯಾಸ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಕಾರ ಕೇಂದ್ರಗಳಾಗಿ ಮುಖ್ಯವಾಗಿ ಮಕ್ಕಳು ಮತ್ತು ಯುವಜನರಲ್ಲಿ ಧನಾತ್ಮಕ ಚಿಂತನೆ ಮತ್ತು ಶಕ್ತಿಯನ್ನು ತುಂಬುವಲ್ಲಿ ಊರಿನ ಭಜನಾ ಮಂದಿರಗಳು ಮುಖ್ಯ ಪಾತ್ರ ವಹಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ಭಜನಾ ಮಂದಿರಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಕಾರ್ಯದಲ್ಲಿ ಆದ್ಯತೆಯಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ವೇದಮೂರ್ತಿ ಕುಡುಪು ನರಸಿಂಹ ತಂತ್ರಿ ಅವರ ಉಪಸ್ಥಿತಿಯಲ್ಲಿ ಪುರೋಹಿತರಾದ ಗಣೇಶ್ ಭಟ್ ಪಚ್ಚನಾಡಿ ಹಾಗೂ ಗುರುರಾಜ್ ತಂತ್ರಿ ಎಡಪದವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಶ್ರೀ, ಹಿರಿಯ ವಕೀಲ ಕೆ.ಶಂಭು ಶರ್ಮ, ನಳಂದ ಫಾರ್ಮ್ಸ್‌ನ ಎನ್.ರವಿರಾಜ್ ರಾವ್, ಸ್ಥಳೀಯ ಜಾರ ಶ್ರೀ ಜಾರಂದಾಯ ದೈವಸ್ಥಾನದ ಗಡಿ ಪ್ರಧಾನರಾದ ಪ್ರಕಾಶ್ ಜತ್ತಿ ಪೂಜಾರಿ, ಪಾಲಿಕೆಯ ಮಾಜಿ ಸದಸ್ಯ ಜಯಪ್ರಕಾಶ್ ವಾಮಂಜೂರು, ಶ್ರೀ ಶಿವಶಕ್ತಿ ಭಜನಾ ಮಂದಿರದ ಅಧ್ಯಕ್ಷ ಉಮಾನಾಥ ಜೋಗಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮಾನಾಥ ಅತ್ತರ್‌ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕರುಣಾಕರ ಆಚಾರ್ಯ, ಶಾರದಾ ಪಪೂ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ನಾಕ್, ಸಿವಿಲ್ ಇಮಜಿನಿಯರ್ ತಾರಾನಾಥ ಕೊಟ್ಟಾರಿ, ನೋಟರಿ ಉಮೇಶ್ ಶೆಟ್ಟಿ, ಜಯಂತ್ ಜೋಗಿ ಮುಂತಾದವರು ಉಪಸ್ಥಿತರಿದ್ದರು.