

ಯಶೋಧರ ವಿ.ಬಂಗೇರ ಮೂಡುಬಿದಿರೆ
ಕರ್ನಾಟಕ ಸರ್ಕಾರದ ಪುರಾತತ್ವ ಇಲಾಖೆಯು ನೂರು ವರ್ಷಗಳಿಗಿಂತಲೂ ಹಳೆಯ ಪ್ರಾಚೀನ ಬಸದಿಗಳು, ಶಾಸ್ತ್ರಗಳು, ಗುಹೆಗಳು, ಶಾಸನಗಳು ಮತ್ತು ಶಿಲ್ಪಗಳನ್ನು ಸಂರಕ್ಷಿಸುವ ತನ್ನ ಯೋಜನೆಯಡಿಯಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಆರಂಭಿಸಿರುವ ನಡುವೆ ಮೂಡುಬಿದಿರೆ ಜೈನಮಠ, ಬಸದಿಗೆ ಈ ನಿಯಂತ್ರಣದಿಂದ ವಿನಾಯಿತಿ ಲಭಿಸಿದೆ. ಮಾತ್ರವಲ್ಲ ಹಿಂದೆ ಮಂಜೂರಾಗಿದ್ದ 2.50 ಕೋಟಿ ರೂ. ಸಹಾಯಧನವನ್ನು ಬಸದಿ ಅಭಿವೃದ್ಧಿಗೆ ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಂದ ಭರವಸೆ ಕೂಡ ಲಭಿಸಿದೆ.
ಅ.13ರಂದು ಬೆಂಗಳೂರಿನಲ್ಲಿ ನಡೆದ ತುರ್ತು ಸಭೆಯಲ್ಲಿ ಬಸದಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಆರಂಭಿಸಿರುವ ವಿಚಾರ ಹಾಗೂ ಸರ್ಕಾರದಿಂದ ಮಂಜೂರಾಗಿರುವ ಅನುದಾನಗಳ ಬಿಡುಗಡೆಯ ವಿಳಂಬ ಕುರಿತು ಚರ್ಚೆ ನಡೆಸಲಾಗಿದೆ. ವಿಷಯದ ಕುರಿತು ಮೂಡುಬಿದಿರೆ ಶ್ರೀ ಜೈನ ಮಠದ ನಿಯೋಗವು ಸರ್ಕಾರದ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಡಿ.ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಪ್ರಾಚೀನ ಬಸದಿಗಳು ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರವು ನಿಯಂತ್ರಣ ಸಾಧಿಸುವ ಆದೇಶದ ಗಂಭೀರತೆ ಮತ್ತು ಇದರಿಂದಾಗುವ ಪರಿಣಾಮಗಳನ್ನು ನಿಯೋಗವು ಸಚಿವರ ಗಮನಕ್ಕೆ ತಂದಿತು. ಈ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಮಠದ ಪರವಾಗಿ ಸಚಿವರಿಗೆ ವಿನಂತಿಸಲಾಯಿತು. ಮನವಿಯ ಗಂಭೀರತೆ ಅರಿತ ಸಚಿವರು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಮೂಡುಬಿದಿರೆ ಶ್ರೀ ಮಠಕ್ಕೆ ಸೇರಿದ ಪ್ರಮುಖ ಬಸದಿ ಹಾಗೂ ಜಿಲ್ಲೆಯ ಇತರ ಬಸದಿಗಳನ್ನು ಈ ಯೋಜನೆಯ ನಿಯಂತ್ರಣದಿಂದ ಕೈಬಿಡಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು.
ಜೈನ ಸಮುದಾಯಕ್ಕೆ ಸಮಾಧಾನ
ಸಚಿವರು ಈ ಭರವಸೆಗಳ ಜತೆಗೆ, ಪ್ರಾಚೀನ ಬಸದಿಗಳು ಮತ್ತು ತೀರ್ಥಕ್ಷೇತ್ರಗಳ ಅಭಿವೃದ್ಧಿಗಾಗಿ ಈಗಾಗಲೇ ಮಂಜೂರಾಗಿರುವ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಮಹತ್ವದ ತುರ್ತು ಸಭೆಯಲ್ಲಿ ಮೂಡುಬಿದಿರೆ ಜೈನ ಶ್ರೀ ಮಠದ ಪರವಾಗಿ, ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಂತೆ ಮಾಳ ಹರ್ಷೇಂದ್ರ ಕುಮಾರ್ ಜೈನ್ ಮತ್ತು ಮಹೇಶ್ ಜೈನ್ ಬೆಂಗಳೂರು ಮನವಿ ಸಲ್ಲಿಸಿದರು. ಸಚಿವರ ತ್ವರಿತ ಸ್ಪಂದನೆ ಮತ್ತು ಭರವಸೆ ಜೈನ ಸಮುದಾಯಕ್ಕೆ ಸಮಾಧಾನ ತಂದಿದೆ.
ಭಟ್ಟಾರಕ ಶ್ರೀ ಮನವಿ
2020-21 ಸಾಲಿನಲ್ಲಿ ಜೈನಕಾಶಿ ಅಭಿವೃದ್ಧಿಗೆ ಸರ್ಕಾರಕ್ಕೆ ಭಟ್ಟಾರಕ ಶ್ರೀ ಪತ್ರ ಬರೆದಿದ್ದರು. ಅಲ್ಲದೆ ಜೈನ ಸ್ಮಾರಕಗಳ ಅವಜ್ಞೆಗೆ ಒಳಗಾದ ಅರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಸಿರುವುದಕ್ಕೂ ಆಕ್ಷೇಪ ಸಲ್ಲಿಸಿದ್ದರು. ಜೈನ ಸ್ಮಾರಕಗಳ ಅವಜ್ಞೆಗೆ ಒಳಗಾದ ಅರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಬಸದಿಯನ್ನು ಸೇರಿಸಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಆದರೆ ಗುರುಗಳ ಬಸದಿ ಸ್ವಾಮೀಜಿ ಪರಂಪರೆಯ ಗುರುಪೀಠವಾಗಿದ್ದು, ನೋಂದಾಯಿತ ಜೈನ ಮಠ ಟ್ರಸ್ಟ್ ಮೂಲಕ ಉತ್ತಮ ನಿರ್ವಹಣೆ ಮಾಡಲಾಗುತ್ತಿದೆ. ನ್ಯಾಯ ಬಸದಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದು, ಅದು ಪರಂಪರೆಯ ನಿಷಿದಿ ಮಂಟಪವಾಗಿದ್ದು, ಪ್ರತಿ ಮಾಹೆ ನವರಾತ್ರಿ ಸಂದರ್ಭ ಹೋಗಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಸಂಬಂಧಪಟ್ಟ ಇಲಾಖೆಗೆ ನಮ್ಮ ಜಿಲ್ಲೆಯ ನೋಟಿಫಿಕೇಷನ್ ಆದ ಸ್ಮಾರಕಗಳನ್ನು ಕೈ ಬಿಡುವಂತೆ ಭಟ್ಟಾರಕಶ್ರೀ ಸರ್ಕಾರಕ್ಕೆ ಈ ಹಿಂದೆ ಮನವಿ ಮಾಡಿದ್ದರು.
ದೇಶ ವಿದೇಶಗಳ ಯಾತ್ರಾರ್ಥಿಗಳನ್ನು ಹೊಂದಿರುವ, ಅಪೂರ್ವ ಸಾಹಿತ್ಯ, ಕಲೆ ಹೊಂದಿರುವ ಜೈನಕಾಶಿ ಮೂಡುಬಿದಿರೆಯ ಸ್ಮಾರಕಗಳನ್ನು ಮಠದ ಕಡೆಯಿಂದ ವ್ಯವಸ್ಥಿತ ರೀತಿಯಲ್ಲಿ ಕಾಪಿಡುತ್ತಿದ್ದೇವೆ. ಸರ್ಕಾರ ನಿಯಂತ್ರಣ ಆದೇಶದಲ್ಲಿ ಮೂಡುಬಿದಿರೆಗೆ ವಿನಾಯಿತಿ ನೀಡಿರುವುದು ಹಾಗೂ ಅನುದಾನವನ್ನು ಆದ್ಯತೆ ಮೇರೆಗೆ ಬಿಡುಗಡೆಗೊಳಿಸಲು ಮುಂದಾಗಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಜೈನಮಠ, ಮೂಡುಬಿದಿರೆ