ತಾಲೂಕಿನಾದ್ಯಂತ ಶೇ.50ರಷ್ಟು ಹೊಸ ತಂತಿ ಅಳವಡಿಕೆ: ಕೃಷ್ಣರಾಜ್ ಹೇಳಿಕೆ

19-sabhe
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ತಾಲೂಕು ವ್ಯಾಪ್ತಿಯಲ್ಲಿ ಶೇ.50ರಷ್ಟು ಹಳೇ ತಂತಿಗಳನ್ನು ತೆಗೆದು ಹೊಸ ತಂತಿಗಳನ್ನು ಅಳವಡಿಸಲಾಗಿದೆ. ಬಾಕಿ ಉಳಿದಿರುವುದನ್ನು ಹಂತ ಹಂತವಾಗಿ ಬದಲಾಯಿಸಲಾಗುವುದು. ಮೂಡುಬಿದಿರೆ ಮೆಸ್ಕಾಂ ಉಪವಿಭಾಗದ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ ಶಿರ್ತಾಡಿಯಲ್ಲಿ ಮೆಸ್ಕಾಂ ಉಪವಿಭಾಗ ತೆರೆಯಲಾಗುವುದು ಎಂದು ಮಂಗಳೂರು ವಿಭಾಗದ ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣರಾಜ್ ತಿಳಿಸಿದರು.

ಮೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ರಾಜೇಶ್ ಕಡಲಕೆರೆ, ಸಂತೋಷ್ ಶೆಟ್ಟಿ, ಆಲ್ವಿನ್ ಡಿಸೋಜ ಮತ್ತಿತರರು ಮೆಸ್ಕಾಂ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಜಿಲ್ಲಾ ಗ್ರಾಹಕ ಒಕ್ಕೂಟದ ಕಾರ್ಯದರ್ಶಿ ರಾಯಿರಾಜ್ ಕುಮಾರ್ ಗ್ರಾಹಕ ಕಾನೂನುಗಳ ಕುರಿತು ಮಾಹಿತಿ ನೀಡಿದರು. ವಿದ್ಯುತ್ ಅದಾಲತ್‌ಗಳಲ್ಲಿ ದೂರು ಸಲ್ಲಿಸಿ ಪರಿಹಾರವಾಗದಿದ್ದರೆ ಒಂಬುಡ್ಸ್‌ಮೆನ್‌ಗೆ ದೂರು ನೀಡಬಹುದು ಎಂದರು.

ಕಾರ್ಯನಿರ್ವಾಹಕ ಇಂಜಿನಿಯರ್ ಸಂತೋಷ್ ನಾಯಕ್, ಮೂಡುಬಿದಿರೆ ವಿಭಾಗದ ಮೆಸ್ಕಾಂ ಇಂಜಿನಿಯರ್ ಮೋಹನ್ ಉಪಸ್ಥಿತರಿದ್ದರು.

ಸ್ಥಳೀಯ ಮಟ್ಟದಲ್ಲಿ ಪರಿಹರಿಸಲು ಸೂಚನೆ

ಮೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿಗಳಿಗೆ ಅಪಾಯಕಾರಿ ಮರದ ಗೆಲ್ಲುಗಳನ್ನು ಕಡಿದು ಅಲ್ಲಿಯೇ ಎಸೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅವುಗಳನ್ನು ತೆರವುಗೊಳಿಸಲು ಸಿಬ್ಬಂದಿಗೆ ಸೂಚಿಸಲಾಗುವುದು. ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಜನರು ದೂರು ನೀಡುವಂತಾಗಬಾರದು. ಇದನ್ನು ಸ್ಥಳೀಯ ಮಟ್ಟದಲ್ಲಿಯೇ ಮೆಸ್ಕಾಂ ಅಧಿಕಾರಿಗಳು ಪರಿಹರಿಸಬೇಕು. ಮೆಸ್ಕಾಂ ಗ್ರಾಹಕರಿಗೆ ತ್ವರಿತ ಗತಿಯಲ್ಲಿ ಸೇವೆ ಸಲ್ಲಿಸಲು ಬದ್ಧವಾಗಿದ್ದರೂ ಕಂಬ ಅಳವಡಿಕೆ, ತಂತಿ ಎಳೆಯುವ ವೇಳೆ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗುವುದರಿಂದ ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೃಷ್ಣರಾಜ್ ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net