ವೃತ್ತವಿದ್ದ ಜಾಗದಲ್ಲಿ ಕೃತಕ ಈಜುಕೊಳ : ಬಿ.ಸಿ.ರೋಡು-ಅಡ್ಡಹೊಳೆಯ ರೋಡ್ ಕಾಮಗಾರಿ ಅವಾಂತರ

13-road
Published on

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರುವೃತ್ತ ತೆರವುಗೊಳಿಸಲಾದ ನಡುರಸ್ತೆಯಲ್ಲಿ ವೃತ್ತಾಕಾರದ ಕೃತಕ ಈಜುಕೊಳ ನಿರ್ಮಾಣವಾಗಿದೆ.

ಸಂಜೆಯಾಗುತ್ತಿದ್ದಂತೆ ಪ್ರತಿದಿನ ಧಾರಾಕಾರ ಮಳೆ ಸುರಿಯುವುದರಿಂದ ವೃತ್ತ ಅಗೆಯಲಾದ ಸ್ಥಳವೀಗ ವಸ್ತುಶಃ ವೃತ್ತಾಕಾರದ ಕೃತಕ ಈಜುಕೊಳದಂತೆ ಭಾಸವಾಗುತ್ತಿದೆ.

ವಾಹನ ಸವಾರರು ಈ ಈಜುಕೊಳವನ್ನು ಸುತ್ತುವರಿದು ಸಂಚರಿಸುವುದರಿಂದ ಯಾವುದೇ ಅಪಾಯ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರು ಸುತ್ತ ಟೇಪ್ ಅಳವಡಿಸಿದ್ದಾರೆ. ವೃತ್ತ ನಿರ್ಮಾಣಕ್ಕೆ ಜೆಸಿಬಿ ಮೂಲಕ ಅಗೆದ ಪರಿಣಾಮ ಪುರಸಭೆಯ ಕುಡಿಯುವ ನೀರು ಪೂರೈಕೆಯ ಕೊಳವೆಗಳಿಗೆ ಹಾನಿಯಾಗಿದ್ದು, ಬಿ.ಸಿ.ರೋಡಿನ ಕೆಲ ಭಾಗಗಳಿಗೆ ಎರಡು ದಿನಗಳಿಂದ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಮಂಗಳವಾರ ಬೆಳಗ್ಗೆ ವೃತ್ತ ನಿರ್ಮಾಣದ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ರಾ.ಹೆ. ಇಲಾಖಾ ಇಂಜಿನಿಯರ್ ಅವರಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರು.

ಇದಕ್ಕೆ ಸ್ಪಂದಿಸಿದ ರಾ.ಹೆ. ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಪಂಪ್ ಅಳವಡಿಸಿ ನೀರನ್ನು ಟ್ಯಾಂಕರ್‌ಗೆ ತುಂಬಿಸಿ ಖಾಲಿ ಮಾಡಲು ಪ್ರಯತ್ನಿಸಿದರು. ಆದರೂ ನೀರು ಖಾಲಿ ಮಾಡಿದಷ್ಟು ತುಂಬುತ್ತಲೇ ಇತ್ತು. ನೀರು ಖಾಲಿಯಾಗದೆ ಹಾನಿಯಾದ ಕೊಳವೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net