ರಾಜಧಾನಿಯಲ್ಲಿ ಪೌರಕಾರ್ಮಿಕರಿಂದ ಹಫ್ತಾ ವಸೂಲಿ

pourakarmika
Published on

ಬೆಂಗಳೂರು: ಕಸ ಗುಡಿಸಿ ರಾಜಧಾನಿಯನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಂದ ಅಧಿಕಾರಿಗಳು ತಿಂಗಳಿಗೆ ಇಂತಿಷ್ಟು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 18 ಸಾವಿರ ಪೌರಕಾರ್ಮಿಕರು ಇದ್ದಾರೆ. ಪ್ರತಿಯೊಬ್ಬರಿಂದ ತಲಾ 600 ರೂ.ನಂತೆ 18 ಸಾವಿರ ಪೌರಕಾರ್ಮಿಕರಿಂದ ಒಟ್ಟು 1 ಕೋಟಿ ರೂ.ಗಳಿಗೂ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಇದರಲ್ಲಿ ಬಂದ ಹಣವನ್ನು ಹೆಲ್ತ್ ಇನ್‌ಸ್ಪೆಕ್ಟರ್, ಮೇಸ್ತ್ರಿಗಳು ಹಂಚುಕೊಳ್ಳುತ್ತಿದ್ದಾರೆ. ಪಾಲಿಕೆಯಲ್ಲಿರುವ 18 ಸಾವಿರ ಪೌರಕಾರ್ಮಿಕರ ಪೈಕಿ 1,500 ಮಂದಿ ಕಾಯಂ ಆಗಿ ಕೆಲಸ ಮಾಡುತ್ತಿದ್ದರೆ, ಉಳಿದವರು ನೇರಪಾವತಿ, ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ನಿತ್ಯ ಬೆಳಗ್ಗೆ ರಸ್ತೆ, ಚರಂಡಿ ಸ್ವಚ್ಛಗೊಳಿಸುವ ಮೂಲಕ ನಗರವನ್ನು ಅಂದವಾಗಿ ಇಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ಪ್ರತಿ ತಿಂಗಳಿಗೆ 16 ಸಾವಿರ ರೂ. ವೇತನ ಸಿಗುತ್ತದೆ. ವೇತನ ಬಂದ ತಕ್ಷಣ 600 ರೂ. ಮಾಮೂಲಿಯನ್ನು ಹೆಲ್ತ್ ಇನ್‌ಸ್ಪೆಕ್ಟರ್ ಹಾಗೂ ಮೇಸ್ತ್ರಿಗಳಿಗೆ ನೀಡಬೇಕಿದೆ. ಒಂದು ವೇಳೆ ಹಣ ನೀಡದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ.

ಹನುಮಂತನಗರ ವಾರ್ಡ್‌ನಲ್ಲಿ ಆರೋಗ್ಯಧಿಕಾರಿ ಸೇರಿ ಮೂವರು ಮೇಸ್ತ್ರಿಗಳು ಪೌರಕಾರ್ಮಿಕರಿಂದ ಹಣ ಪೀಕುವ ದಂಧೆಯಲ್ಲಿ ತೊಡಗಿದ್ದಾರೆ. ಈ ವಾರ್ಡ್‌ನಲ್ಲಿ 35 ಪೌರಕಾರ್ಮಿಕರು ಇರುತ್ತಾರೆ. ಪ್ರತಿಯೊಬ್ಬರಿಂದ ತಲಾ 600 ರೂ.ನಂತೆ 21 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ಕೆಲ ಅಧಿಕಾರಿಗಳು ಕಾರ್ಮಿಕರನ್ನು ತಮ್ಮ ಮನೆಯ ದೈನಂದಿನ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಕಾಯಂ ಸಿಬ್ಬಂದಿ ಮಾದರಿಯಲ್ಲಿ ಗುತ್ತಿಗೆ ಪೌರಕಾರ್ಮಿಕರು ಸಹ ಪ್ರತಿನಿತ್ಯ ಬೆಳಗ್ಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ವೇತನದಲ್ಲಿ ಕಡಿತಗೊಳ್ಳುವ ಇಎಸ್‌ಐ, ಪಿಎಫ್​​​ ಹೊರತುಪಡಿಸಿ ಯಾವುದೇ ರೀತಿ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಕೆಲ ಗುತ್ತಿಗೆದಾರರು ಇಎಸ್‌ಐ ಹಾಗೂ ಪಿಎಫ್​​​ನ್ನೂ ಪಾವತಿಸುತ್ತಿಲ್ಲ.

ಕೆಲ ಕಾಯಂ ಪೌರಕಾರ್ಮಿಕರು ಪ್ರತಿ ನಿತ್ಯ ಬೆಳಗ್ಗೆ ಬುಕ್‌ನಲ್ಲಿ ಸಹಿ ಹಾಕಿ ಸ್ವಚ್ಛತೆ ಕಾರ್ಯದಲ್ಲಿ ತೊಡಗದೆ ಮನೆಗೆ ತೆರಳುತ್ತಿದ್ದಾರೆ. ಅಧಿಕಾರಿಗಳು ಇವರ ಜತೆ ಶಾಮೀಲಾಗಿ ತಿಂಗಳಿಗೆ 5 ಸಾವಿರ ರೂ. ಮಮೂಲಿ ಪಡೆಯುತ್ತಿದ್ದಾರೆ. ನಗರದ ಇತರ ವಾರ್ಡ್‌ಗಳಲ್ಲಿ ಈ ದಂಧೆ ನಡೆಯುತ್ತಿದೆ. ಹೀಗೆ 5 ಸಾವಿರ ರೂ. ಕೊಡುವವರು ಸ್ವಚ್ಛತಾ ಕಾರ್ಯಕ್ಕೆ ಹಲವು ದಿನ ಗೈರಾಗಿ, ಬಳಿಕ ಕೆಲಸಕ್ಕೆ ಹಾಜರಾಗಿದ್ದೇವೆ ಎಂದು ಅಧಿಕಾರಿಗಳ ಮೂಲಕ ಪುಸ್ತಕದಲ್ಲಿ ದಾಖಲಾಗುವಂತೆ ನೋಡಿಕೊಳ್ಳುತ್ತಾರೆ.

ಕಡ್ಡಾಯ ಸೌಲಭ್ಯದಿಂದ ವಂಚಿತ: ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ವಿಶ್ರಾಂತಿ, ಗೃಹ, ಕುಡಿಯುವ ನೀರು, ಶೌಚಗೃಹ, ಪ್ರಥಮ ಚಿಕಿತ್ಸಾ, ಶುಚಿತ್ವ ಸೌಲಭ್ಯ, ಸಮವಸ, ಕೈಗವಸು, ಟೋಪಿ, ರಬ್ಬರ್ ಬೂಟ್‌ಗಳು, ಪಾದರಕ್ಷೆ, ಶುಚಿಗೊಳಿಸುವ ಸಾಧನ, ಕಸಬರಿಗೆ, ತರಿಮಣಿ, ಸಲಿಕೆ, ಮಾಸ್ಕ್, ಗಮೇಲ, ಕಳೆ ತೆಗೆಯುವ ಯಂತ್ರ, ಚರಂಡಿ ಶುಚಿಗೊಳಿಸುವ ಉಪಕರಣ, ಬಿದಿರಿನ ಬುಟ್ಟಿಗಳು, ತ್ಯಾಜ್ಯ ಸಾಗಿಸುವ ಬಂಡಿ, ಫಿನೈಲ್ ಹಾಗೂ ಬ್ಲೀಚಿಂಗ್ ಪೌಡರ್ ಸೇರಿ 22 ಸೌಲಭ್ಯಗಳನ್ನು ಒದಗಿಸಬೇಕು. ಆದರೆ, ಕೆಲವೆಡೆ ಸೌಲಭ್ಯಗಳು ವಂಚಿತದಿಂದ ಪೌರಕಾರ್ಮಿಕರ ಕೆಲಸ ಮಾಡುವಂತಾಗಿದೆ.ಕೆಲ ಪೌರಕಾರ್ಮಿಕರಿಗೆ ತಿಂಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಸಿಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net