16ರಿಂದ ರಾಜ್ಯದಲ್ಲಿ ಕ್ಷೀಣಿಸಲಿದೆ ಮುಂಗಾರು

Mansoon vvani
Published on

ಬೆಂಗಳೂರು: ದೇಶದಲ್ಲಿ ನೈಋತ್ಯ ಮಾನ್ಸೂನ್(ಮುಂಗಾರು) ಕ್ಷೀಣಗೊಳ್ಳುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಮುನ್ಸೂಚನೆ ವರದಿ ನೀಡಿದ ಬೆನ್ನಲ್ಲೇ, ರಾಜ್ಯದಲ್ಲಿಯೂ ಸೆ.16ರಿಂದ ಮಳೆ ಇಳಿಮುಖಗೊಳ್ಳಲಿದೆ. ಈ ಮೂಲಕ ಪ್ರಸಕ್ತ ಸಾಲಿನ ಮುಂಗಾರು ಸೆ.30ಕ್ಕೆ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ.

ಬಾಗಲಕೋಟೆ, ವಿಜಯಪುರದಲ್ಲಿ ಮುಂದಿನ ಮೂರು ದಿನ, ಬೆಳಗಾವಿಯಲ್ಲಿ ಸೆ.15, 16ರಂದು, ಧಾರವಾಡ, ಗದಗದಲ್ಲಿ ಸೆ.14ರಂದು ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿಯಲ್ಲಿ ಸೆ.16ರಿಂದ ಎರಡು ದಿನ, ಬೀದರ್ ಮತ್ತು ಯಾದಗಿರಿಯಲ್ಲಿ ಸೆ.17ರಂದು ಬಿರುಸಾಗಿ ಮಳೆಯಾಗುವುದರಿಂದ ಯೆಲ್ಲೋ ಅಲರ್ಟ್ ಇರಲಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಸೇರಿ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ. ಸೆ.16ರಿಂದ ಈ ಮೇಲಿನ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net