

ಬೆಂಗಳೂರು: ಈ ಬಾರಿಯ ಮುಂಗಾರು(ನೈಋತ್ಯ ಮಾನ್ಸೂನ್) ಕೆಲ ಐತಿಹಾಸಿಕ ದಾಖಲೆ ಬರೆದಿದೆ.16 ವರ್ಷದ ಬಳಿಕ ವಾಡಿಕೆಗಿಂತ 8-10 ದಿನ ಮೊದಲೇ ರಾಜ್ಯದ ಕರಾವಳಿ ಭಾಗಕ್ಕೆ ಪ್ರವೇಶಿಸಿದ್ದ ಮುಂಗಾರು, ಇತಿಹಾಸದಲ್ಲಿ ಮೊದಲ ಬಾರಿಗೆ ಮೇ 26ರಂದು ರಾಜ್ಯಾದ್ಯಂತ ವ್ಯಾಪಿಸಿರುವುದು ಚಾರಿತ್ರಿಕ ದಾಖಲೆಯಾಗಿದೆ.
ಇದುವರೆಗೆ ಮೇನಲ್ಲಿ ಮುಂಗಾರು ವ್ಯಾಪಿಸಿರುವ ನಿರ್ದೇಶನಗಳಿಲ್ಲ. ಆದರೆ, ಈ ಬಾರಿ ಮುಂಗಾರು ಆಗಮಿಸಿದ 2 ದಿನದಲ್ಲೇ ಚಾಮರಾಜನಗರದಿಂದ ಬೀದರ್ವರೆಗೆ ಹಾಗೂ ಮಂಗಳೂರುನಿಂದ ಬೆಂಗಳೂರುವರೆಗೆ ಮಾರುತಗಳು ವ್ಯಾಪಿಸಿರುವುದು ಇದೇ ಮೊದಲು. ಅಲ್ಲದೆ, ರಾಜಧಾನಿ ಬೆಂಗಳೂರಿನಲ್ಲಿ ಮೇ 1ರಿಂದ ಮೇ 26ರವರೆಗೆ 307 ಮಿಮೀ ಮಳೆ ಸುರಿದಿರುವುದು ಹೊಸ ದಾಖಲೆಯಾಗಿದೆ. 2023ರ ಮೇನಲ್ಲಿ 305 ಮಿಮೀ ಬಿದ್ದಿರುವುದು ಹಳೆಯ ದಾಖಲೆಯಾಗಿತ್ತು.
ವಾಡಿಕೆಯಂತೆ ಜೂ.10ರೊಳಗೆ ರಾಜ್ಯಾದ್ಯಂತ ಮಾನ್ಸೂನ್ ವ್ಯಾಪಿಸಬೇಕಿತ್ತು. ಆದರೆ, ಈ ಬಾರಿ ಕರಾವಳಿಗೆ ಭಾಗಕ್ಕೆ ಪ್ರವೇಶಿಸಿದ ಮಾನ್ಸೂನ್, 2 ದಿನದಲ್ಲೇ ಇಡೀ ರಾಜ್ಯಕ್ಕೆ ಆವರಿಸಿರುವುದು ಇದೇ ಮೊದಲು. ಇದೊಂದು ಐತಿಹಾಸಿಕ ದಾಖಲೆ ಎನ್ನಬಹುದು.
| ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.