

ಮಂಗಗಳ ಸಾವಿಗೆ ವಿಷಮಿಶ್ರಿತ ತೆಂಗು, ಶೇಂಗಾ ಕಾರಣಮರಣೋತ್ತರ ಪರೀಕ್ಷೆಯಲ್ಲಿ ದೃಢ
ರಾಮನಗರ
ಕೋತಿಗೆ ಪ್ರಿಯವಾದ ಆಹಾರಗಳೇ ಅವುಗಳಿಗೆ ಮುಳುವಾಯಿತೇ?
ಹೌದು, ಹಾರೋಹಳ್ಳಿ ತಾಲೂಕಿನ ಯಲವಚಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಸುಪಟ್ಟಣ ಗ್ರಾಮದ ರಸ್ತೆಬದಿ ಗೋಣಿಚೀಲದಲ್ಲಿ ಪತ್ತೆಯಾದ ಮೃತ ಕೋತಿಗಳ ಸಾವು ಆಹಾರದಲ್ಲಿ ವಿಷ ಬೆರೆಸಿದ್ದರಿಂದಲೇ ಆಗಿದೆ ಎನ್ನುವುದು ಪತ್ತೆಯಾಗಿದೆ.
ವಿಜಯವಾಣಿ ವರದಿ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ವಾಸುಪಟ್ಟಣದ ಬಳಿ ಅಂತ್ಯಸಂಸ್ಕಾರ ಮಾಡಲಾಗಿದ್ದ ಕೋತಿಗಳ ಕಳೇಬರಗಳನ್ನು ಹೊರ ತೆಗೆದರು. ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯಕಿಯ ಅಧಿಕಾರಿಗಳು, ವಿಷಮಿಶ್ರಿತ ತೆಂಗಿನಕಾಯಿ ಮತ್ತು ಶೇಂಗಾ (ಕಡಲೆ ಬೀಜ) ಸೇವನೆಯಿಂದಲೇ ಕೋತಿಗಳು ಮೃತಪಟ್ಟಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಇದರೊಂದಿಗೆ ಕೋತಿಗಳನ್ನು ಪ್ರಜ್ಞಾಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ ಎನ್ನುವುದು ಖಚಿತಪಟ್ಟಿದೆ.
ಈ ಸಂಬಂಧ ವಿಜಯವಾಣಿ ವರದಿ ಪ್ರಕಟ ಮಾಡಿತ್ತು. ಇದರಿಂದ ಎಚ್ಚೆತ್ತ ಕನಕಪುರ ಪ್ರಾದೇಶಿಕ ಅರಣ್ಯ ಉಪವಿಭಾಗದ ಎಸಿಎಫ್ ಗಣೇಶ್, ಆರ್ಎಫ್ಒ ದಾಳೇಶ್ ಸ್ಥಳಕ್ಕೆ ಭೇಟಿ ನೀಡಿ ಕೋತಿಗಳ ಮೃತದೇಹಗಳನ್ನು ಹೊರತೆಗೆದು ಪರಿಶೀಲನೆ ನಡೆಸಿದರು. ಮೊದಲಿಗೆ ಇವುಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಸಾಯಿಸಲಾಗಿದೆ ಎಂದು ಹೇಳಲಾಗಿತ್ತಾದರೂ. ಪರಿಶೀಲನೆ ನಂತರ ವಿಷ ಉಣಿಸಿ ಸಾಯಿಸಿರುವುದು ದೃಢಪಟ್ಟಿದೆ.
ಬೆಳೆ ರಕ್ಷಣೆಗಾಗಿ ಕೋತಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದಷ್ಟೇ ಅಲ್ಲದೆ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜಿವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ, ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.