ಮನೆ ಮನೆಗೆ ತೆರಳಿ ಮಂಗನ ಕಾಯಿಲೆ ಲಸಿಕೆ ನೀಡುತ್ತಿರುವ ಸಿಬ್ಬಂದಿ

26sdp1
Published on

ಸಿದ್ದಾಪುರ: ತಾಲೂಕಿನಲ್ಲಿ ಕಳೆದ ವರ್ಷ ಮಂಗನ ಕಾಯಿಲೆ ಕಾಣಿಸಿಕೊಂಡು ಮೂರು ಜನ ಮೃತಪಟ್ಟಿದ್ದರಿಂದ ಆರೋಗ್ಯ ಇಲಾಖೆ ಈಗಾಗಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಲಸಿಕೆ ನೀಡುವುದಕ್ಕೆ ಮುಂದಾಗಿದೆ.

ಹೊನ್ನೆಘಟಗಿಯಲ್ಲಿ ಕಳೆದ ಹಲವು ದಿನದ ಹಿಂದೆ ಒಂದು ಮಂಗ ರೋಗದಿಂದ ಸತ್ತಿರುವುದು ದೃಢಪಟ್ಟಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಆರೋಗ್ಯ ಇಲಾಖೆಗೆ ಇದೊಂದು ಸವಾಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ ಸ್ಥಳಕ್ಕೆ ಭೇಟಿ ನೀಡಿ ರೋಗದ ಕುರಿತು ಜಾಗೃತಿ ಸಭೆ ನಡೆಸಿ ಜನತೆಗೆ ಧೈರ್ಯ ತುಂಬಿದ್ದಾರೆ.

ಜಾಗೃತಿ ಕಾರ್ಯಕ್ರಮ: ತಾಲೂಕಿನ 266 ಶಾಲೆಯಲ್ಲಿ ನೋಡಲ್ ಶಿಕ್ಷಕರ ಮೂಲಕ ಮಕ್ಕಳಿಗೆ ರೋಗದ ಕುರಿತು ಮನವರಿಕೆ. ಆರೋಗ್ಯ, ಅರಣ್ಯ. ಪಶುಸಂಗೋಪನೆ, ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡ ತಂಡ ರಚಿಸ ಲಾಗಿದ್ದು, ಒಂದೊಂದು ತಂಡದಲ್ಲಿ ಐದರಿಂದ ಆರು ಜನ ಕಾರ್ಯನಿರ್ವಹಿಸುತ್ತಿದ್ದು ಇವರು ಪ್ರತಿ ಮನೆಗೆ ಭೇಟಿ ನೀಡಿ ಮಂಗನ ಕಾಯಿಲೆ ಕುರಿತು ಮಾಹಿತಿ ನೀಡಿ ಜತೆಗೆ ಲಸಿಕೆಯನ್ನು ನೀಡುತ್ತಿದ್ದಾರೆ. ಈಗಾಗಲೇ 11ಸಾವಿರದ 444 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನೂ 54 ಸಾವಿರ ಜನರಿಗೆ ನೀಡಬೇಕಾಗಿದೆ.

ಕೆಎಫ್​ಡಿ ಕಾರ್ಡ್ ಲಸಿಕೆ ಪಡೆದುಕೊಂಡವರಿಗೆ ಕೆಎಫ್​ಡಿ ಕಾರ್ಡ್ ವಿತರಿಸಲಾಗುತ್ತಿದೆ. ಒಮ್ಮೆ ರೋಗ ಕಾಣಿಸಿಕೊಂಡರೆ ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ. 48 ಗಂಟೆಯಲ್ಲಿ ರಕ್ತ ತಪಾಸಣೆ ವರದಿ ಬರಲಿದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಬೇರೆ ಆಸ್ಪತ್ರೆಗೆ ದಾಖಲಿಸಿ ಉಚಿತ ಚಿಕಿತ್ಸೆ, ಆಂಬುಲೆನ್ಸ್ ಸೌಲಭ್ಯವನ್ನು ಆರೋಗ್ಯ ಇಲಾಖೆ ಕಲ್ಪಿಸಿದೆ.

ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಯಾವುದೇ ಆತಂಕ ಬೇಡ. ಜನತೆ ಬೆಟ್ಟ- ಗುಡ್ಡ-ಅಡವಿಗೆ ತೆರಳುವಾಗ ಮೈಗೆ ಡಿಎಂಪಿ ತೈಲ ಹಚ್ಚಿಕೊಂಡೇ ಹೋಗಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಾಲೂಕು ಆಸ್ಪತ್ರೆಗೆ ಅಥವಾ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. | ಡಾ.ಲಕ್ಷ್ಮೀಕಾಂತ ನಾಯ್ಕ ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net