ಎಂಟಿಪಿ ಕಿಟ್ ಕಾನೂನುಬಾಹಿರ ಮಾರಾಟ ತಡೆಗೆ ತಂಡ ರಚನೆ

MTP Kit
Published on

ಬೆಂಗಳೂರು: ಭ್ರೂಣ ಹತ್ಯೆ ನಿಯಂತ್ರಿಸಲು ವೈದ್ಯರ ಸಲಹೆ ಇಲ್ಲದೆ ಕಾನೂನುಬಾಹಿರವಾಗಿ ಎಂಟಿಪಿ ಕಿಟ್ ಮಾರಾಟ ತಡೆಗಾಗಿ ಆರೋಗ್ಯ ಇಲಾಖೆ ವಿಶೇಷ ತಂಡ ರಚಿಸಿದೆ.

ಜಿಲ್ಲಾ ಕೇಂದ್ರಗಳಲ್ಲಿ ಕಾನೂನುಬಾಹಿರವಾಗಿ ಎಂಟಿಪಿ ಕಿಟ್ ಔಷಧಗಳ ದಾಸ್ತಾನು, ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪ್ರಾದೇಶಿಕ ಕಚೇರಿ ಉಪ ಔಷಧ ನಿಯಂತ್ರಕರ ನೇತೃತ್ವದಲ್ಲಿ ಜಿಲ್ಲಾ ಸಹಾಯಕ ಔಷಧ ನಿಯಂತ್ರಕರು, ತಾಲೂಕು ಆರೋಗ್ಯಧಿಕಾರಿಗಳು ಮತ್ತು ಪ್ರಾದೇಶಿಕ ವೈದ್ಯಾಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ.

ಈ ತಂಡ, ಎಂಟಿಪಿ ಔಷಧ ವಿತರಿಸುವ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತೀ ತಿಂಗಳು 20ನೇ ತಾರೀಖಿನೊಳಗೆ ರಾಜ್ಯ ಕುಟುಂಬ ಕಲ್ಯಾಣ ವಿಭಾಗಕ್ಕೆ (6 ನೇ ಮಹಡಿ ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು) ವರದಿ ಸಲ್ಲಿಸಲು ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಎಂಟಿಪಿ ಕಿಟ್‌ಗಳು ಶೆಡ್ಯೂಲ್ ಎಚ್ ಔಷಧಗಳ ಗುಂಪಿನಲ್ಲಿರುವುದರಿಂದ ವೈದ್ಯರ ಸಲಹೆ ಇಲ್ಲದೆ ಈ ಔಷಧಗಳ ಮಾರಾಟ ಮಾಡುವಂತಿಲ್ಲ. ಎಂಟಿಪಿ ಕಾಯ್ದೆ 1971ರ ಅನ್ವಯ ಎಂಎಂಎ (ಮೆಡಿಕಲ್ ಮ್ಯಾನೇಜ್ಮೆಂಟ್ ಆ್ ಅಬಾರ್ಷನ್) ಮೂಲಕ ಮಾಡುವ ಸುರಕ್ಷಿತ ಗರ್ಭಪಾತ ಸೇವೆಗಳನ್ನು ನೋಂದಾಯಿತವಲ್ಲದ ಸ್ಥಳದಲ್ಲಿ ಮಾಡುವುದೂ ಸಹ ಕಾನೂನು ಬಾಹಿರವಾಗಿದೆ. ಅದೇ ರೀತಿ ನೋಂದಾಯಿವಲ್ಲದ ವೈದ್ಯರ ಚಿಕಿತ್ಸಾ ಸಲಹೆ ಅಥವಾ ಚೀಟಿಯೊಂದಿಗೆ ಮಾತ್ರೆ ವಿತರಿಸುವುದೂ ಅಪರಾಧವಾಗಿರುತ್ತದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net