ರಸ್ತೆಯ ಹಣ ಗ್ಯಾರಂಟಿಗೆ-ರೂಪಾಲಿ ಆರೋಪ

Road strike
Published on

ಕಾರವಾರ :ನಗರದಲ್ಲಿ ತಮ್ಮ ಅವಧಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳ ಅನುದಾನವನ್ನು ಕಡಿತ ಮಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ಎಂಎಲ್‌ಎ ಇದ್ದಾಗ ಮಂಜೂರು ಮಾಡಿ, ಭೂಮಿ ಪೂಜೆ ಮಾಡಿ ಪ್ರಾರಂಭವಾದ ಕಾಮಗಾರಿಗಳ ಅನುದಾನ ಕಡಿತ ಮಾಡಲಾಗಿದೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಹಬ್ಬುವಾಡ ರಸ್ತೆ, ಮಾಲಾದೇವಿ ಮೈದಾನ, ನಗರೋತ್ಥಾನದ ಅನುದಾನಗಳನ್ನು ಕಡಿತ ಮಾಡಲಾಗಿದೆ ಎಂದು ದೂರಿದರು.
ಪ್ರತಿಭಟನೆ:
ಗೀತಾಂಜಲಿ ಚಿತ್ರ ಮಂದಿರದಿಂದ ಹಬ್ಬುವಾಡ ಇಸ್ಕಾನ್‌ವರೆಗೆ ನಿರ್ಮಾಣವಾದ ಕಾಂಕ್ರಿಟ್ ರಸ್ತೆಯ ನಡುವೆ ಡಿವೈಡರ್ ನಿರ್ಮಾಣಕ್ಕೆ ಬಿಟ್ಟಿದ್ದ ಕಾಲುವೆಯನ್ನು ಸಿಮೆಂಟ್‌ನಿಂದ ಮುಚ್ಚುವ ಕಾಮಗಾರಿ ಸೋಮವಾರ ಪ್ರಾರಂಭವಾಗಿದೆ. ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಪ್ರಮುಖರು ಸೋಮವಾರ ಪ್ರತಿಭಟನೆ ನಡೆಸಿ ಕಾಮಗಾರಿ ತಡೆದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಮಗಾರಿ ಕೈಗೊಂಡ ಗುತ್ತಿಗೆ ಕಂಪನಿಯ ಅಧಿಕಾರಿಗಳನ್ನು, ನಂತರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ನಾಯ್ಕ, ಕಾರವಾರ ಗೀತಾಂಜಲಿ ಟಾಕೀಸ್‌ನಿಂದ ಎಪಿಎಂಸಿವರೆಗೆ ಕಾಂಕ್ರಿಟ್ ರಸ್ತೆ, ನಿರ್ಮಾಣಕ್ಕೆ 8 ಕೋಟಿ ರೂ. ವಿಶೇಷ ಅನುದಾನವನ್ನು ನನ್ನ ಶಾಸಕತ್ವದ ಅವಽಯಲ್ಲಿ ಮಂಜೂರು ಮಾಡಿಸಿದ್ದೆ. ಗೀತಾಂಜಲಿಯಿಂದ ಇಸ್ಕಾನ್ ಕ್ರಾಸ್‌ವರೆಗೆ 5 ಕೋಟಿ ರೂ. ರಸ್ತೆ, ಡಿವೈಡರ್ ಹಾಗೂ ನಡುವೆ ವಿದ್ಯುದ್ದೀಪ ಅಳವಡಿಕೆ ಯೋಜನೆ ಇತ್ತು. ಅಲ್ಲದೆ, ಚರಂಡಿ ನಿರ್ಮಾಣ ಮಾಡಿ ಅದರ ಮೇಲೆ ಸ್ಲ್ಯಾಬ್ ಅಳವಡಿಕೆಗೆ ಪ್ರತ್ಯೇಕವಾಗಿ 1 ಕೋಟಿ ರೂ. ಮೀಸಲಿಡಲಾಗಿತ್ತು. ಎಲ್ಲ ಕಾಮಗಾರಿಗೆ ಭೂಮಿ ಪೂಜೆ ನಡೆದು, ಗುತ್ತಿಗೆ ಫೈನಲ್ ಆಗಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿಯೇ ರಸ್ತೆ ಕಾಮಗಾರಿ ಪೂರ್ಣವಾಗಿದೆ. ಆದರೆ, ಗುತ್ತಿಗೆದಾರರು ಡಿವೈಡರ್ ಹಾಗೂ ನಡುವೆ ಲೈಟ್ ಅಳವಡಿಸಿಲ್ಲ. ಚರಂಡಿ ಕಾಮಗಾರಿ ಪೂರ್ಣ ಮಾಡಿಲ್ಲ. ಚರಂಡಿ ಮೇಲೆ ಸ್ಲ್ಯಾಬ್ ಅಳವಡಿಸಿಲ್ಲವೇಕೆ ಎಂದು ಪ್ರಶ್ನಿಸಿದರು.
ಸತೀಶ ಸೈಲ್ ಹಿಂದಿನ ಶಾಸಕತ್ವ ಅವಧಿಯಲ್ಲಿ ನಿರ್ಮಾಣವಾದ ಕಾರವಾರ-ಕೋಡಿಬಾಗ ರಸ್ತೆಯಲ್ಲಿ ಸಾಕಷ್ಟು ಜಾಗ ಇಲ್ಲದಿದ್ದರೂ ಅಲ್ಲಿ ನಡುವೆ ಡಿವೈಡರ್ ಅಳವಡಿಸಲಾಗಿದೆ. ನನ್ನ ಶಾಸಕತ್ವ ಅವಽಯಲ್ಲಿ ಮಾಡಿದ ಕಾಮಗಾರಿಗೆ ಹಾಲಿ ಶಾಸಕ ಸೈಲ್ ತಡೆಯೊಡ್ಡಿದ್ದಾರೆ. ನಗರಸಭೆಯಲ್ಲಿ ಸದಸ್ಯರು ಅಧ್ಯಕ್ಷರು ಇಲ್ಲದ ಅವಽಯಲ್ಲಿ ಡಿವೈಡರ್ ಬೇಡ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ದೂರಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ್,ನಗರಸಭೆ ಸ್ಥಾಯಿ ಸಮಿತಿ ಚೇರ್ಮನ್ ಮನೋಜ ಬಾಂದೇಕರ್, ಸದಸ್ಯರಾದ ಶಿಲ್ಪಾ ನಾಯ್ಕ, ಪ್ರೇಮಾನಂದ ಗುನಗಾ, ರವಿರಾಜ ಅಂಕೋಲೆಕರ್, ಅನುಶ್ರೀ ಕುಬಡೆ, ಉಲ್ಲಾಸ ಕೇಣಿ, ಹನುಮಂತ ತಳವಾರ್, ಮಾಲಾ ಹುಲಸ್ವಾರ್, ಪ್ರದೀಪ ಗುನಗಿ ಈ ಸಂದರ್ಭದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net