More

    ಭವಿಷ್ಯ ರೂಪಿಸುವ ಪತ್ರಿಕೆಗಳಿಗೆ ಭವಿಷ್ಯ

    ಯಲ್ಲಾಪುರ: ಪತ್ರಿಕೆಗಳಿಗೆ ಭವಿಷ್ಯ ಇಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಅದು ಸುಳ್ಳು. ಭವಿಷ್ಯವನ್ನು ರೂಪಿಸುವ ಪತ್ರಿಕೆಗಳಿಗೆ ಭವಿಷ್ಯ ಇದೆ” ಎಂದು ವಿಶ್ವದರ್ಶನ ಎಜುಕೇಶನ್ ಸೊಸೈಟಿ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅವರು ಹೇಳಿದರು.

    ವಿಶ್ವದರ್ಶನ ಸಂಸ್ಥೆಯಲ್ಲಿ, ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

    ಈಗ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಸ್ಪರ್ಧೆ ಇದೆ. ಕೇವಲ ಆಗಿಹೋದ ಘಟನೆಗಳನ್ನು ವರದಿ ಮಾಡಿದರೆ ಪತ್ರಿಕೆಗಳು ಉಳಿಯಲು ಸಾಧ್ಯವಿಲ್ಲ. ನಾಳಿನ ಆಲೋಚನೆಗಳಿಗೆ, ಆಗುಹೋಗುಗಳಿಗೆ ಓದುಗರ ಮನಸ್ಸನ್ನು ಅಣಿಗೊಳಿಸುವ, ತೆರೆದಿಡುವ ಕೆಲಸ ಆಗಬೇಕು. ಅಂದಾಗ ಓದುಗರು ಪತ್ರಿಕೆಯನ್ನು ತಾವಾಗಿ ಕೇಳಿ ಪಡೆಯುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.

    ಪತ್ರಕರ್ತ ಸತ್ಯಶೋಧಕನಾಗಿರಬೇಕು ಮತ್ತು ನ್ಯಾಯನಿಷ್ಠುರಿ ಆಗಿರಬೇಕು. ಪತ್ರಿಕೋದ್ಯಮ ಒಂದು ಜವಾಬ್ದಾರಿಯುತ ಕೆಲಸ. ಪತ್ರಕರ್ತರಿಗೆ ಜೀವನದ ಕಷ್ಟಸುಖಗಳ ಅನುಭವ ಇರಬೇಕು. ಅಂದಾಗ ಉತ್ತಮ ರೀತಿಯಲ್ಲಿ ವೃತ್ತಿ ನಿಭಾಯಿಸಬಹುದು ಎಂದು ಅವರು ಹೇಳಿದರು.

    1999ಕ್ಕಿಂತ ಮುಂಚೆ ಕನ್ನಡ ಪತ್ರಿಕೋದ್ಯಮ ನಿಂತ ನೀರಾಗಿತ್ತು. ವಿಜಯ ಸಂಕೇಶ್ವರ ಅವರ ಪ್ರವೇಶ ಈ ರಂಗದಲ್ಲಿ ಸಂಚಲನ ಮೂಡಿಸಿತು. ಹೊಸ ಪತ್ರಕರ್ತರಿಗೆ ಅವಕಾಶಗಳು ಸೃಷ್ಟಿಯಾದವು ಎಂದು ಹರಿಪ್ರಕಾಶ ಕೋಣೆಮನೆ ಉಲ್ಲೇಖಿಸಿದರು. ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಮೂಲಕ ಉತ್ತಮ, ವೃತ್ತಿಪರ ಪತ್ರಕರ್ತರನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ವಿವರಿಸಿದರು.

    ವಿಶ್ರಾಂತ ಪ್ರಾಚಾರ್ಯ ಹಾಗೂ ಮೀಡಿಯಾ ಸ್ಕೂಲ್ ಉಪನ್ಯಾಸಕ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಸಕಲ ಸೌಲಭ್ಯ ಹೊಂದಿದ್ದು, ಮಾದರಿಯಾಗಿದೆ. ಇಲ್ಲಿ ಉತ್ತಮ ಪತ್ರಕರ್ತರು ರೂಪಿತವಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
    ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ನೀಡಲಾಗುವ ವೈವಿಧ್ಯಮಯ ಕಲಿಕೆಯ ಚಿಂತನೆಗಳನ್ನು ತೆರೆದಿಟ್ಟರು.

    ಪತ್ರಿಕೋದ್ಯಮ ಉಪನ್ಯಾಸಕರಾದ ವಿನಯ ಹೆಗಡೆ, ಸ್ಫೂರ್ತಿ ಹೆಗಡೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನಾಗರಾಜ ಪಟಗಾರ , ಕವಿತಾ ರಾಜನಾಳ ಮತ್ತು ಮೇಘನಾ ಆಚಾರಿ ಅನಿಸಿಕೆ ವ್ಯಕ್ತಪಡಿಸಿದರು. ವಿನಯ ನಾಯ್ಕ ಸ್ವಾಗತಿಸಿದರು. ಸೌಂದರ್ಯ ನಾಯ್ಕ ನಿರ್ವಹಿಸಿದರು. ವಾಣಿ ಭಟ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts