ಸೋಮವಾರ ಧರ್ಮಸ್ಥಳ ಚಲೋ

ಸೋಮವಾರ ಧರ್ಮಸ್ಥಳ ಚಲೋ
Published on

ಹಾಸನ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರದ ವಿರುದ್ಧ ಸೆ.1 ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ರಾಜ್ಯಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ತಿಳಿಸಿದರು.

ಶುಕ್ರವಾರ ಮಧ್ಯಾಹ್ನ ಪಕ್ಷದ ಕಚೇರಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯಾಧ್ಯಕ್ಷರ ಕರೆಯ ಮೇರೆಗೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅಂದು ಮಧ್ಯಾಹ್ನ 2 ಗಂಟೆಗೆ ಯಾತ್ರೆ ಶುರುವಾಗಲಿದ್ದು, ಸುಮಾರು 10 ಸಾವಿರ ಜನರು ಭಾಗಿಯಾಗಲಿದ್ದಾರೆ ಎಂದರು.

ಈ ಸಂಬಂಧ ಇಂದು ಪೂರ್ವಭಾವಿ ಸಭೆ ನಡೆಸಲಾಗಿದೆ. ಸಮಸ್ತ ಹಿಂದು ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಮಂಜುನಾಥನ ಭಕ್ತರು, ಶ್ರೀ ಕ್ಷೇತ್ರದ ಹಿತೈಷಿಗಳು ಭಾಗಿಯಾಗಿ ಪಿತೂರಿ ಮಾಡುವವರಿಗೆ ಉತ್ತರ ಕೊಡಬೇಕು ಎಂದು ವಿನಂತಿಸಿದರು.

ಸನಾತನ ಹಿಂದು ಧರ್ಮದ ವಿರುದ್ಧ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕಾಗಿಯೇ ಕೆಲವರು ಒಂದು ತಂಡದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ರಾಜ್ಯ-ದೇಶದ ಗಮನ ಸೆಳೆದಿದೆ. ಕಪಟಿಗಳ ನಿಜಬಣ್ಣ ಬಯಲಾಗಬೇಕು, ನಾವು ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಹಿಂದು ಧರ್ಮ ಉಳಿಸಲು ಬಿಜೆಪಿ ಸದಾ ಮುಂದೆ ಇರಲಿದೆ ಎಂದರು.

ಎಸ್‌ಐಟಿ ರಚನೆಯಿಂದ ಮಂಜುನಾಥನ ಭಕ್ತರಿಗೆ ಆಘಾತವಾಗಿದೆ. ತನಿಖೆ ದಿಕ್ಕು ತಪ್ಪಬಾರದು, ಸತ್ಯ ಹೊರ ಬರಲಿ, ಆದರೆ, ಹಿಂದುಗಳ ಭಾವನೆಗೆ ಧಕ್ಕೆ, ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಪ್ರಯತ್ನ ಮಾಡುತ್ತಿರುವುದರ ವಿರುದ್ಧ ನಮ್ಮ ಹೋರಾಟ ಎಂದರು.

ಸಮಸ್ತ ಹಿಂದು ಬಾಂಧವರು ಒಂದಾಗಿದ್ದೇವೆ ಎಂಬ ಸಂದೇಶ ಸಾರುವುದೂ ನಮ್ಮ ಉದ್ದೇಶ. ಧರ್ಮ, ನಂಬಿಕೆಗೆ ಧಕ್ಕೆಯಾದಾಗ ನಾವು ಸುಮ್ಮನಿರಲ್ಲ ಎಂದರು.

ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್ ಇದ್ದರು.

ಹಿಂದು ಸಂಪ್ರದಾಯದಂತೆ ಉದ್ಘಾಟಿಸಿದರೆ ಅಡ್ಡಿ ಇಲ್ಲ: ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರು ತಾಯಿ ಚಾಮುಂಡಿ ಹಾಗೂ ಹಿಂದು ಸಂಪ್ರದಾಯ ಒಪ್ಪಿ ಪೂಜೆ ಮಾಡಿ, ಉದ್ಘಾಟನೆ ಮಾಡಿದರೆ ನನ್ನ ಅಡ್ಡಿ ಇಲ್ಲ. ಅವರಲ್ಲಿ ಆ ನಂಬಿಕೆ, ಶ್ರದ್ಧೆ, ಭಾವನೆ ಇದೆ ಎಂದು ನಾನು ನಂಬಿರುವೆ. ಅದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ ಎಂದು ಪ್ರೀತಂ ಪ್ರತಿಕ್ರಿಯಿಸಿದರು. ಬೇರೆಯವರ ಮಾತಿಗೆ ಉತ್ತರಿಸಲು ನಾನು ಅವರ ವಕ್ತಾರ ಆಗಲ್ಲ, ನಮ್ಮ ನಂಬಿಕೆ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ಉದ್ಘಾಟನೆ ಮಾಡಿದರೆ ನಾನೇಕೆ ಬೇಡ ಎನ್ನಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net