

ಗೌರಿಬಿದನೂರು: ಮಠಗಳು ಧರ್ಮದ ಸಂದೇಶದ ಜತೆಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿವೆ. ಈ ನಿಟ್ಟಿನಲ್ಲಿ ಮಠಗಳಿಗೆ ಭಕ್ತರನ್ನು ಬರಮಾಡಿಕೊಳ್ಳುವ ಸಲುವಾಗಿ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸೇವಾ ಸಮಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟದ ಶ್ರೀ ಕ್ಷೇತ್ರದಲ್ಲಿ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಜೂ.9ರ ಬೆಳಗ್ಗೆ 10 ಗಂಟೆಗೆ 18ನೇ ವಾರ್ಷಿಕೋತ್ಸವ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪುಸ್ತಕ ದಾಸೋಹ, ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ, ಉಚಿತ ಸಾಮೂಹಿಕ ದೀಕ್ಷೆ, ಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ ಎಂದರು.
ಗುರು-ಶಿಷ್ಯರ ಸಂಬಂಧ
ಸಮಾಜದಲ್ಲಿ ಗುರು ಮತ್ತು ಶಿಷ್ಯರದು ಗಟ್ಟಿಯಾದ ಸಂಬಂಧ. ಇದನ್ನು ಉಳಿಸಿ ಬೆಳೆಸಲು ಇಂತಹ ಸಮಾರಂಭ ಸಹಕಾರಿಯಾಗಲಿವೆ. ಸಮಾಜ, ಸಂಸಾರದಲ್ಲಿ ಸಂಬಂಧಗಳು ಗಟ್ಟಿಯಾಗಿ ಉಳಿದಾಗ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದರು. ಜೀವನದ ಜಂಜಾಟದಲ್ಲಿ ಪ್ರತಿಯೊಬ್ಬರೂ ಕೆಲ ಸಮಯ ಮಠಗಳು, ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ನೆಮ್ಮದಿಯನ್ನು ಪಡೆದುಕೊಳ್ಳಬೇಕು ಎಂದು ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
₹1.25 ಕೋಟಿ ದಾಸೋಹ ಭವನ
ತಾಲೂಕಿನ ಮಂಚೇನಹಳ್ಳಿ ಶಶಿಧರ್ ಅವರ ಸಹಕಾರದಿಂದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ 1.25 ಕೋಟಿ ರೂ. ಅನುದಾನ ಸಿಕ್ಕಿದ್ದು, ಕ್ಷೇತ್ರದಲ್ಲಿ ದಾಸೋಹ ಭವನ, ಭಕ್ತರಿಗೆ ತಂಗಲು ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.
ವೀರಶೈವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಖಜಾಂಚಿ ನಂಜುಂಡಪ್ಪ, ನಿರ್ದೇಶಕರಾದ ಜಿ.ಆರ್.ಪ್ರವೀಣ್ ಕುಮಾರ್, ದೇವಿ ಮಂಜುನಾಥ್, ಎಚ್.ಪಿ. ನಟರಾಜ್, ಜಗದಾಂಬ, ಸತೀಶ್, ಫ್ಯಾಕ್ಟರಿ ನಟರಾಜ್, ನಾಗರಾಜ್, ಮುಖಂಡರಾದ ಗೌರೀಶ್, ಎನ್.ಆರ್. ರವಿಕುಮಾರ್, ಟಿ.ಜಿ. ಗಂಗಾಧರಪ್ಪ, ಶಿವಕುಮಾರ್ ಆರಾಧ್ಯ, ಮಹೇಂದ್ರ, ಬಸವರಾಜು ಮುಂತಾದವರು ಭಾಗವಹಿಸಿದ್ದರು.
ಬಸ್ ವ್ಯವಸ್ಥೆ
ಜೂ.9ರಂದು ಬೆಳಗ್ಗೆ 7 ಗಂಟೆಗೆ ಗೌರಿಬಿದನೂರಿನ ಮಧುಗಿರಿ ರಸ್ತೆಯಲ್ಲಿರುವ ಎಲ್ಐಸಿ ಕಚೇರಿ ಎದುರು, ಹೊಸೂರು ಕೋಟಾಲದಿನ್ನೆ ಬಳಿ, ತರಿದಾಳು ಗ್ರಾಮ, ಅಲಕಾಪುರ ಶ್ರೀ ಚನ್ನಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಲು ಭಕ್ತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ, ಹೆಚ್ಚಿನ ವಿವರಗಳಿಗೆ ಬೋರ್‌ವೆಲ್ ಮಹೇಂದ್ರ (990253671), ಫ್ಯಾಕ್ಟರಿ ನಟರಾಜ್ (9448257433), ಎನ್.ಆರ್. ರವಿಕುಮಾರ್ (9880883941), ಟಿ.ಜಿ. ಗಂಗಾಧರಪ್ಪ (9449314206), ಗೌರೀಶ್ (9480268168) ಅವರನ್ನು ಸಂಪರ್ಕಿಸಬಹುದು ಎಂದು ವೀರಶೈವ ಮಹಾಸಭಾ ನಿರ್ದೇಶಕ ಟಿ.ಜಿ.ಗಂಗಾಧರಪ್ಪ ತಿಳಿಸಿದ್ದಾರೆ.
ಸಮಾಜದಲ್ಲಿ ಧರ್ಮ ಜಾಗೃತಿ ಜತೆಗೆ ಪರಿಸರ ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ಆಗ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ನೀಡಬಹುದಾಗಿದೆ, ಶ್ರೀ ಕ್ಷೇತ್ರದ ಸಮಾರಂಭದಲ್ಲಿ 6 ಸಾವಿರ ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುವುದು. ಪರಿಸರವನ್ನು ಉಳಿಸಿದಾಗ ಮಾತ್ರ ನಾವು ಮತ್ತು ಮುಂದಿನ ಪೀಳಿಗೆ ಉಳಿಯಲು ಸಾಧ್ಯ
- ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕ್ಷೇತ್ರ ಸಿದ್ಧರಬೆಟ್ಟ