ಮೈದುಂಬಿ ಹರಿಯುತ್ತಿದೆ ಮೂಲೆಹೊಳೆ

07-GPT-2
Published on

ಗುಂಡ್ಲುಪೇಟೆ: ಕಳೆದ ಒಂದು ತಿಂಗಳಿಂದ ಕೇರಳದಲ್ಲಿ ಉತ್ತಮ ಮಳೆ ಬೀಳುತ್ತಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂಲೆಹೊಳೆ ಉಕ್ಕಿ ಹರಿಯುತ್ತಿದೆ.


ಕೇರಳದಲ್ಲಿ ಹುಟ್ಟಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಲ್ಲಿ ಹರಿದು ಕಬಿನಿ ಸೇರುವ ಮೂಲೆ ಹೊಳೆ ವನ್ಯಜೀವಿಗಳ ಪಾಲಿಗೆ ಸದಾ ನೀರು ಪೂರೈಸುವ ನದಿ. ಕಳೆದ ವರ್ಷ ಸಮರ್ಪಕವಾಗಿ ಮಳೆ ಬೀಳದ ಕಾರಣ ನೀರಿನ ಹರಿವಿಲ್ಲದೆ ಹೊಳೆಯು ಸಂಪೂರ್ಣ ಬತ್ತಿ ಹೋಗಿತ್ತು. ಇದರಿಂದ ವನ್ಯಜೀವಿಗಳು ಕುಡಿಯುವ ನೀರಿಗೆ ಹೊಳೆ ಪಾತ್ರದ ಕಲ್ಲುಬಂಡೆಗಳ ಕೊರಕಲುಗಳ ನಡುವೆ ಮಡುಗಟ್ಟಿದ್ದ ನೀರನ್ನೇ ಅವಲಂಬಿಸಿದ್ದವು. ಈ ಭಾಗದ ಆನೆಗಳು, ಕಾಟಿ ಮುಂತಾದ ವನ್ಯಜೀವಿಗಳು ಕಬಿನಿ ಹಿನ್ನೀರಿನತ್ತ ವಲಸೆ ತೆರಳಿದ್ದರೆ ಕಲ್ಕೆರೆ ವಲಯದ ರಾಂಪುರದ ಸಾಕಾನೆ ಶಿಬಿರಕ್ಕೂ ನೀರಿನ ಕೊರತೆಯಾಗಿತ್ತು.
ಈ ಬಾರಿ ಕೇರಳದಲ್ಲಿ ಉತ್ತಮ ಮುಂಗಾರು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬತ್ತಿಹೋಗಿದ್ದ ಮೂಲೆಹೊಳೆ ಭೋರ್ಗರೆದು ಹರಿಯುತ್ತಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲೂ ಉತ್ತಮ ಮಳೆಬಿದ್ದ ಪರಿಣಾಮ ಅರಣ್ಯ ಪ್ರದೇಶಗಳಿಂದ ಹಳ್ಳ ಕೊಳ್ಳಗಳಿಂದ ನೀರು ಹರಿದು ಬರುತ್ತಿದೆ. ಕಾಡಿನಿಂದ ಬರುವ ನೀರು ಮೂಲೆ ಹೊಳೆಯನ್ನು ಸೇರುತ್ತಿರುವುದರಿಂದ ಮೈದುಂಬಿ ಹರಿದು ಕಬಿನಿಯನ್ನು ಸೇರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net