ಮರ್ಯಾದೆ ಹರಾಜು ಹಾಕುತ್ತೇನೆ ಎಂಬ ಬೆದರಿಕೆಗೆ ನಲಪಾಡ್​ ಹೆದರಿ ಪೊಲೀಸ್ ದೂರು ದಾಖಲಿಸಿದರೇ?: ಬೆದರಿಸಿದವರು ಯಾರು?!

Nalapad vvani
Published on

ಬೆಂಗಳೂರು: ಶಾಸಕ ಹ್ಯಾರಿಸ್​ ಅವರ ಪುತ್ರ ಹಾಗೂ ಬೆಂಗಳೂರು ಯುವ ಕಾಂಗ್ರೆಸ್​ ಅಧ್ಯಕ್ಷ ಮಹಮದ್ ಹ್ಯಾರಿಸ್​ ನಲಪಾಡ್​ ಯುವ ಕಾಂಗ್ರೆಸ್​ ಸಭೆಯಲ್ಲಿ ಉಂಟಾದ ಗಲಾಟೆ ಹಿನ್ನೆಲೆಯಲ್ಲಿ ಸಚಿನ್​ಗೌಡ ಎಂಬುವವರ ವಿರುದ್ಧ ವೈಯಾಲಿಕಾವಲ್​ ಠಾಣೆಯಲ್ಲಿದೂರು ನೀಡಿದ್ದಾರೆ.

ವೈಯಾಲಿಕಾವಲ್​ನ ತೆಲುಗು ಸಮಿತಿಯಲ್ಲಿ ರಾಜ್ಯ ಯುವ ಕಾಂಗ್ರೆಸ್​ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. ಭಾಷಣ ಸ್ಪರ್ಧೆ ನಡೆದು ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ನಂತರ ಸಚಿನ್​ಗೌಡ ಎಂಬುವವರು ಬೆಂಗಳೂರು ನಗರ ಯುವ ಕಾಂಗ್ರೆಸ್​ ಉಸ್ತುವಾರಿ ವಹಿಸಿದ್ದ ಇಮ್ರಾನ್​ ಬಳಿ ಶಾಸಕರ ಪುತ್ರನಾದ ಗೌತಮ್​ನನ್ನು ವೇದಿಕೆಗೆ ಏಕೆ ಕರೆಯಲಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಇಮ್ರಾನ್​ ಇದು ಕಾಂಗ್ರೆಸ್​ ಪಕ್ಷದ ಕಾರ್ಯಕ್ರಮ ಹೀಗಾಗಿ ನೀವು ಕೇಳುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸಚಿನ್​ ಹಾಗೂ ಇಮ್ರಾನ್​ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು.

ನಲಪಾಡ್​ ಮಧ್ಯ ಪ್ರವೇಶ ಮಾಡಿ ಇಬ್ಬರನ್ನು ಸಮಾಧಾನಗೊಳಿಸಲು ಮುಂದಾದರು. ಆಗ ಸಚಿನ್​ ಕೋಪಗೊಂಡು ಇದನ್ನು ಕೇಳಲು ನೀನು ಯಾರು? ನಾನು ಹಾಗೂ ಇಮ್ರಾನ್​ ಮಾತನಾಡುತ್ತಿದ್ದೇವೆ ನೀನು ಮಧ್ಯ ಬರಬೇಡ ಎಂದು ಹೇಳಿದ್ದಾರೆ. ಇದಕ್ಕೆ ನಲಪಾಡ್​ ಪ್ರತಿಕ್ರಿಯೆ ನೀಡಿ ನಾನು ಯುವ ಕಾಂಗ್ರೆಸ್​ ಸಮಿತಿ ಅಧ್ಯಕ್ಷನಾಗಿದ್ದೇನೆ. ಈ ಕಾರ್ಯಕ್ರಮ ನನ್ನ ಉಸ್ತುವಾರಿಯಲ್ಲೇ ನಡೆಯುತ್ತಿದೆ. ಹೀಗಾಗಿ ನನಗೆ ಕೇಳುವ ಹಕ್ಕು ಇದೆ ಎಂದರು. ನಂತರ ಹೊರ ನಡೆದ ಸಚಿನ್​ ಅಲ್ಲಿ ಎದುರಾದ ನಲಪಾಡ್​ಗೆ ನಿನ್ನ ಮರ್ಯಾದೆಯನ್ನು ಮಾಧ್ಯಮಗಳಲ್ಲಿ ಹರಾಜುಹಾಕುತ್ತೇನೆ ಎಂದು ಬೆದರಿಕೆ ಹಾಕಿದರು. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ನಲಪಾಡ್​ ಹೇಳಿದ್ದಾರೆ.

ನನ್ನ ಜತೆ ಜಗಳ ಮಾಡಿದ ಸಚಿನ್​ ಯಾರು ಎಂದು ಗೊತ್ತಿಲ್ಲ. ಅಲ್ಲದೆ ನನ್ನ ವಿರುದ್ಧ ಸಂಚು ನಡೆಸಿ ತೇಜೋವಧೆ ಮಾಡಲು ಮುಂದಾಗಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಅವರು ದೂರು ನೀಡಿದ್ದಾರೆ.

ಸಚ್ಚಿನ್​ಗೌಡ ಅವರು ನಲಪಾಡ್​ ವಿರುದ್ಧ ದೂರು ನೀಡಲು ತಯಾರಿ ಮಾಡಿಕೊಂಡಿದ್ದರು. ಅವರು ದೂರು ನೀಡುವ ಮೊದಲೇ ನಲಪಾಡ್​ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net