ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿ ಗೆಲ್ಲಿಸಿ

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿ ಗೆಲ್ಲಿಸಿ
Published on

ನಂಜನಗೂಡು: ಮಹಿಳೆಯರಿಗೆ ರಾಜಕೀಯ ಮೀಸಲಾತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆಗಳನ್ನು ಜನತೆಗೆ ತಿಳಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ಹೇಳಿದರು.

ನಗರದ ದೇವೀರಮ್ಮನಹಳ್ಳಿಯಲ್ಲಿರುವ ಶರಣ ಸಂಗಮ ಮಠದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಾರಿಶಕ್ತಿ ವಂದನಾ ವಾಕಥಾನ್ ಹಾಗೂ ತಿರಂಗಾಯಾತ್ರಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ಪುರುಷರಷ್ಟೇ ಸರಿಸಮಾನರು ಎಂಬುದನ್ನು ನಾವು ಹೇಳುತ್ತೇವೆ. ಆದರೆ, ಅಕ್ಷರಶಃ ಅದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜಕೀಯವಾಗಿ ಶೇ.33ರಷ್ಟು ಮೀಸಲಾತಿಯನ್ನು ಘೋಷಣೆ ಮಾಡುವ ಮೂಲಕ ಮಹಿಳೆಯರೂ ಕೂಡ ಸಂವಿಧಾನಿಕ ಹುದ್ದೆಯನ್ನು ಅಲಂಕರಿಸಬೇಕೆಂಬುದು ಅವರ ಧ್ಯೇಯವಾಗಿದೆ. ಅಂತೆಯೇ, ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆ ಜಾರಿಗೊಳಿಸಿ ಸ್ತ್ರೀಕುಲಕ್ಕೆ ಸಿಗಬೇಕಾದ ಎಲ್ಲ ಸೂಕ್ತ ಸ್ಥಾನಮಾನವನ್ನು ನರೇಂದ್ರ ಮೋದಿ ಮಾಡಿದ್ದಾರೆ. ಇದರಲ್ಲಿ ಕೇವಲ ಹಿಂದುಗಳು ಮಾತ್ರವಲ್ಲದೆ, ಎಲ್ಲ ಧರ್ಮೀಯ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶವಿದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್‌ಗಳಲ್ಲಿ ನೇರ ಸಾಲ ಸೌಲಭ್ಯ ಸಿಗುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಜತೆಗೆ ಸಾಲ ಸೌಲಭ್ಯ ಪಡೆಯಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಬಡ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ರಾಜ್ಯ ಸರ್ಕಾರ 10 ಕೆ.ಜಿ. ಅಕ್ಕಿ ಉಚಿತವಾಗಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಅಕ್ಕಿಯನ್ನು ಕೇಂದ್ರ ಸರ್ಕಾರವೇ ಕೊಡುತ್ತಿದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂಬುದನ್ನು ನಾವು ಮನಗಾನಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ ಇನ್ನು ಆರು ತಿಂಗಳಲ್ಲಿ ಮೆಚ್ಯುರಿಟಿಗೆ ಬಂದು ಅದರ ಸೌಲಭ್ಯವನ್ನು ರಾಜ್ಯದ ಲಕ್ಷಾಂತರ ಹೆಣ್ಣು ಮಕ್ಕಳು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಜ್ವಲ್ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆಗಳು ಬಡವರ್ಗದ ಜನರಿಗೆ ಆಸರೆಯಾಗಿವೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದಿನಿ ಮಹೇಶ್ ಮಾತನಾಡಿ, ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಸ್ತ್ರೀಯರ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ. ಇದರ ಪ್ರಯೋಜನ ಪಡೆದುಕೊಂಡಿರುವ ನಾವೆಲ್ಲರೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ಮುಂದಾಗಬೇಕಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಗಳ ಸೋಮಶೇಖರ್, ಸಿ.ಚಿಕ್ಕರಂಗನಾಯ್ಕ, ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ಬಿಸಿಎಂ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಚಂದ್ರು, ಪ್ರಧಾನ ಕಾರ್ಯದರ್ಶಿ ಎನ್.ಸಿ.ಬಸವಣ್ಣ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದಿನಿ ಮಹೇಶ್, ನಗರಸಭಾ ಸದಸ್ಯ ಮಹದೇವಸ್ವಾಮಿ, ಕಪಿಲೇಶ್, ಮಹದೇವಪ್ರಸಾದ್, ಮೀನಾಕ್ಷಿ ನಾಗರಾಜು, ಮುಖಂಡ ಪಿ.ಮಹೇಶ್, ಶ್ರೀನಿವಾಸರೆಡ್ಡಿ, ಎನ್.ವಿ. ವಿನಯಕುಮಾರ್, ಮಹೇಶ್‌ಬಾಬು, ಮಹೇಶ್, ಉಮೇಶ್ ಮೋದಿ, ಸಿದ್ದರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net