

ಕಿಕ್ಕೇರಿ: ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಯ್ಕೆಯಾಗಿರುವುದು ಸಂತಸವಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಟಿ.ಪರಮೇಶ್ ತಿಳಿಸಿದರು.
ಇಲ್ಲಿನ ಅಂಗಡಿಬೀದಿಯಲ್ಲಿ ಜ್ಯೋತಿರ್ಪಣ ಬಳಗ ಹಾಗೂ ಮೋದಿ ಅಭಿಮಾನಿ ಬಳಗದವರು ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಂಪುಟ ದರ್ಜೆ ಸಚಿವರ ಪ್ರಮಾಣವಚನ ಸ್ವೀಕಾರ ಸಂಭ್ರಮೋತ್ಸವ ಭಾನುವಾರ ರಾತ್ರಿ ಸಿಹಿ ಹಂಚುವ ಮೂಲಕ ಆಚರಿಸಿ ಮಾತನಾಡಿ, ಜ್ಯೋತಿಪಣ ಸಮುದಾಯದ ಹೆಮ್ಮೆಯ ಪುತ್ರ ಮೋದಿ ಅವರು. ರಾಷ್ಟ್ರದ ಸಮಗ್ರತೆ, ಏಕತೆ, ಅಭಿವೃದ್ಧಿಗಾಗಿ ಹಗಲಿರುಳು ಮೋದಿ ದುಡಿಯುತ್ತಿದ್ದು ಇವರಿಗೆ ಆಯಸ್ಸು, ಆರೋಗ್ಯ ಲಭಿಸಲಿ ಎಂದರು.
ಕರ್ನಾಟಕಕ್ಕೆ ಈ ಬಾರಿ ಹೆಚ್ಚಿನ ಸಂಪುಟ ದರ್ಜೆ ಸ್ಥಾನ ದೊರೆತಿದೆ. ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಜನತೆ ಬಹಳ ಭರವಸೆ ಹೊತ್ತಿಕೊಂಡಿದ್ದು, ಮೋದಿ ಅವರು ಕುಮಾರಸ್ವಾಮಿ ಅವರಿಗೆ ಉತ್ತಮ ಸ್ಥಾನ ನೀಡಬೇಕು ಎಂದು ಬಳಗದವರು ಆಶಯ ವ್ಯಕ್ತಪಡಿಸಿದರು.
ಮೋದಿ ಅವರ ಬೃಹತ್ ಕಟೌಟ್ ನಿರ್ಮಿಸಿ ಪುಷ್ಪಾರ್ಚನೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನ ಮೆರೆದರು.
ಮುಖಂಡರಾದ ಕೆ.ವಿ.ಅರುಣಕುಮಾರ್, ಸಣ್ಣಪ್ಪ, ಅರವಿಂದ್, ಎಲೆ ರಾಜು, ಚಂದ್ರು, ಮಂಜು, ಜೇಟುಸಿಂಗ್, ಫತಾರಾಂ, ಸುರೇಶ್, ಕೆಂಪಯ್ಯ ಮತ್ತಿತರರು ಹಾಜರಿದ್ದರು.