ಪೂರ್ಣಗೊಳ್ಳದ ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆಗಳ ಆಧುನೀಕರಣ

CANAL
1.ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡಿ ಬಳಿ ವಿತರಣೆ ಕಾಲುವೆ ನಿಧಾನಗತಿಯಲ್ಲಿ ನಡೆಯುತ್ತಿರುವುದು. 2. ಕಾಲುವೆಗೆ ನೀರು ಹರಿಸುವ ಸಂದರ್ಭದಲ್ಲಿ ಕಿಷ್ಕಿಂಧಾ ರೆಸಾರ್ಟ್‌ಗೆ ತೆರಳುವ ಕಾಲುವೆ ಕಾಮಗಾರಿ ದುರಸ್ತಿ ಕೈಗೊಳ್ಳುತ್ತಿರುವುದು. 3. ಗಂಗಾವತಿ ತಾಲೂಕಿನ ವಿಪ್ರ ಭಾಗದ ವಿತರಣೆ ಕಾಲುವೆ ಆಧುನೀಕರಣಗೊಂಡಿರುವುದು.
Published on

ವಿಜಯವಾಣಿ ವಿಶೇಷ

ಗಂಗಾವತಿ; ತುಂಗಭದ್ರಾ ಎಡದಂಡೆ ವಿತರಣೆ ಕಾಲುವೆಗಳ ಆಧುನೀಕರಣ ಕಾಮಗಾರಿ ನಿಧಾನಗತಿಯಲ್ಲಿದ್ದು, ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸುವ ಅವಧಿಯಲ್ಲಿ ಕೈಗೆತ್ತಿಕೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಬಿಜೆಪಿ ಆಡಳಿತಾವಧಿಯಲ್ಲಿ ಎಡ ಮತ್ತು ಬಲದಂಡೆ ಭಾಗದ ವಿತರಣೆ ಕಾಲುವೆ, ಸೇತುವೆ ಮತ್ತು ಬಸಿ ಕಾಲುವೆಗಳ ಆಧುನೀಕರಣಕ್ಕಾಗಿ 3.71 ಕೋಟಿ ರೂ.ಮಂಜೂರಾಗಿದ್ದು, ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನೊಂದಿಗೆ 2019ರಲ್ಲಿ ಟೆಂಡರ್ ಕರೆಯಲಾಗಿತ್ತು.

ಕ್ಲೋಸರ್ ಅವಧಿ, ಕೋವಿಡ್ ಮತ್ತು ಅನುದಾನ ಬಿಡುಗಡೆ ವಿಳಂಬ ಹಿನ್ನೆಲೆಯಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಸದ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿಲ್ಲ. ಅಧಿಕಾರಿಗಳ ಲೆಕ್ಕಚಾರದಲ್ಲಿ ಶೇ.70 ಪೂರ್ಣಗೊಂಡಿರುವ ಬಗ್ಗೆ ಮಾಹಿತಿಯಿದ್ದರೂ, ಪ್ರಮುಖ ಸ್ಥಳದಲ್ಲಿ ಕಾಮಗಾರಿ ಇನ್ನೂ ಕೈಗೆತ್ತಿಕೊಂಡಿಲ್ಲ. 16 ಪ್ರಮುಖ ಕಾಲುವೆ ವ್ಯಾಪ್ತಿಯ ಹಲವು ಕಾಮಗಾರಿಗಳು ಇನ್ನೂ ಬಾಕಿಯಿದ್ದು, ಇನ್ನಷ್ಟು ವಿಳಂಬವಾಗಲಿದೆ. ಟೆಂಡರ್ ನಿಯಮಾವಳಿಯಂತೆ ಎರಡೂವರೆ ವರ್ಷದಲ್ಲಿ ಪೂರ್ಣಗೊಳ್ಳಬೇಕಿತ್ತು. ಸೈಟ್ ಕಂಡೀಷನ್ ಮತ್ತು ಹವಾಮಾನ ವೈಪರೀತ್ಯ ಕಾಮಗಾರಿಗೆ ಅಡ್ಡಿಯಾಗಿದೆ.

ಕಾಮಗಾರಿಗಳೆಷ್ಟು? ಎಡದಂಡೆ ವಿಜಯನಗರ ಕಾಲುವೆ ವಡ್ಡರಹಟ್ಟಿಯ ಕರ್ನಾಟಕ ನೀರಾವರಿ ನಿಗಮದ ನಂ.2 ವಿಭಾಗದಲ್ಲಿ ಹುಲಿಗಿ(10.69ಕಿ.ಮೀ), ಶಿವಪುರ(6.58ಕಿ.ಮೀ), ಆನೆಗೊಂದಿ(13ಕಿ.ಮೀ), ಗಂಗಾವತಿ ಕೆಳಮೈ(3.56ಕಿ.ಮೀ), ಮೇಲಮೈ(3.60ಕಿ.ಮೀ) ಕಾಲುವೆಗಳ ಕಾಮಗಾರಿ ನಡೆಯುತ್ತಿದೆ.

ಮಿನಿ ಕ್ರೆಸ್ಟ್ ಅಕ್ವಡೆಕ್ಟ್, ಸೇತುವೆ, ಸಂಪರ್ಕ ಬೆಡ್ ಸೇರಿ 216 ಕಾಂಕ್ರಿಟ್ ಕಾಮಗಾರಿ ನಿರ್ವಹಿಸಬೇಕಿದೆ. ಕಾಲುವೆ ನಿರ್ವಹಣೆ ಆರ್‌ಎನ್ ಶೆಟ್ಟಿ ಕಂಪನಿ ಪಡೆದಿದ್ದು, ಆಧುನಿಕ ಯಂತ್ರ ಮತ್ತು ಅನುಭವಿ ಕಾರ್ಮಿಕರನ್ನು ಕರೆತಂದಿದ್ದರೂ, ಕಾಮಗಾರಿಗೆ ವೇಗ ದೊರೆತಿಲ್ಲ. ಕ್ಲೋಸರ್ ಅವಧಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿ ಮುಂಗಾರು ಮಳೆ ಆರಂಭದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೂ 33 ಕೋಟಿ ರೂ. ವೆಚ್ಚದ ಬಿಲ್ ಪಾವತಿಯಾಗಿದ್ದು, ನಿಗಮದಲ್ಲಿ ಸಿಬ್ಬಂದಿ ಕೊರತೆಯಿಂದ ಕಾಮಗಾರಿ ಸ್ಥಳದಲ್ಲಿ ಉಸ್ತುವಾರಿಗಳಿಲ್ಲ.

ಕ್ಲೋಸರ್ ಅವಧಿಯಲ್ಲಿ ಕೈಗೆತ್ತಿಕೊಳ್ಳಬೇಕಿರುವ ಕಾಲುವೆ ಆಧುನೀಕರಣ ಕಾಮಗಾರಿಯನ್ನು ನೀರು ಹರಿಸುವ ಸಂದರ್ಭದಲ್ಲಿ ಕೈಗೆತ್ತಿಕೊಂಡಿದ್ದು ಸರಿಯಲ್ಲ. ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ವಿಳಂಬದ ಬಗ್ಗೆ ಸರ್ಕಾರದ ಗಮನಕ್ಕೂ ತರುತ್ತೇನೆ.ಗಾಲಿ ಜನಾರ್ದನರೆಡ್ಡಿ, ಶಾಸಕ, ಗಂಗಾವತಿ ಪ್ರಸಕ್ತ ಸಾಲಿನಲ್ಲಿ ಕಾಮಗಾರಿ ತಡವಾಗಿ ಆರಂಭವಾಗಿದ್ದು, ಸೈಟ್ ಕಂಡೀಷನ್ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ. ಗುಣಮಟ್ಟ ಕಾಯ್ದುಕೊಳ್ಳಲಾಗಿದ್ದು, ಎಲ್ಲಿಯಾದರೂ ತೊಂದರೆಯಾಗಿದ್ದರೆ ಪರಿಶೀಲಿಸಲಾಗುವುದು. ಕಾಲುವೆಗೆ ನೀರು ಹರಿಸಲಾಗುತ್ತಿರುವುದರಿಂದ ಕಾಮಗಾರಿ ಬಂದ್ ಮಾಡಲಾಗುವುದು.ಎಸ್.ಎಂ.ಗೋಡೇಕರ್, ಇಇ, ಕರ್ನಾಟಕ ನೀರಾವರಿ ನಿಗಮ, ನಂ.2 ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net