

ನವದೆಹಲಿ: 16ನೇ ಆವೃತ್ತಿಯ ಐಪಿಎಲ್ನಲ್ಲಿ ಟ್ರೋಫಿ ಗೆದ್ದ ಬಳಿಕ ಕಣ್ಮರೆ ಆಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿದು 3 ವರ್ಷವಾದರೂ ಅವರ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕುಗ್ಗಿಲ್ಲ. ಇನ್ನೂ ಹೆಚ್ಚಾಗುತ್ತಲೇ ಇದೆ ಎಂಬುದು ವಿಶೇಷ.
ಸೋಷಿಯಲ್ ಮೀಡಿಯಾಗೆ ಸದಾ ದೂರವಿರುವ ಕೂಲ್ ಕ್ಯಾಪ್ಟನ್ ಹೆಸರು, ಒಂದಿಲ್ಲೊಂದು ವಿಷಯಕ್ಕೆ ಸದಾ ಟ್ರೆಂಡ್ನಲ್ಲಿ ಇರುತ್ತಾರೆ. ಇದೀಗ ಮತ್ತೊಂದು ವಿಷಯಕ್ಕೆ ಟ್ರೆಂಡ್ ಆಗುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ವಿಮಾನದಲ್ಲಿ ಇರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮಾಹಿ ಫ್ಲೈಟ್‌ನಲ್ಲಿ ಮಲಗಿದ್ದರು. ಈ ವೇಳೆ ವಿಮಾನದಲ್ಲಿದ್ದ ಗಗನಸಖಿಯೊಬ್ಬರು ಈ ವಿಡಿಯೋ ಮಾಡಿದ್ದಾರೆ. ಗಗನಸಖಿಯೇ ರಹಸ್ಯವಾಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ' ಈ ದಿನದ ಮೋಹಕವಾದ ವಿಡಿಯೋ' ಎಂದು ಶೀರ್ಷಿಕೆ ನೀಡಲಾಗಿದೆ.
ಈ ವೈರಲ್ ವಿಡಿಯೋವನ್ನು ಫ್ಯಾನ್ಸ್ ಲೈಕ್ ಮಾಡುತ್ತಾ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಹಲವರು ಮೆಚ್ಚಿಕೊಂಡರೆ, ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ನನಗೂ ಮಹಿಯನ್ನು ಹೀಗೆಯೇ ನೋಡಬೇಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಸರಿಯಲ್ಲ ಎಂದಿದ್ದಾರೆ. ಇದು ವ್ಯಕ್ತಿಯ ಖಾಸಗಿತನದ ಮೇಲೆ ಪರಿಣಾಮ ಬೀರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಇಂಡಿಗೋ ವಿಮಾನದಲ್ಲಿ ಗಗನಸಖಿಯೊಬ್ಬರು ಎಂಎಸ್ ಧೋನಿಗೆ ಚಾಕೊಲೇಟ್ ನೀಡಿರುವ ವಿಡಿಯೋ ಟ್ವಿಟರ್ನಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ವಿಮಾನದಲ್ಲಿ ನಿದ್ದೆ ಮಾಡುತ್ತಿರುವ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.