ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ
ಗ್ರಾಮೀಣ ಹಾಗೂ ನಗರ ಕಾರ್ಮಿಕರು, ಜನಸಾಮಾನ್ಯರಿಗೆ ಮತ್ತು ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧೋಪಚಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಗರದಲ್ಲಿ ಸಂಚಾರಿ ಆರೋಗ್ಯ ಸೇವಾ ಫಟಕ ಆರಂಭಿಸಿದೆ.
ನಗರದ ಪ್ಯಾರಗಾನ್ ಶಾಲೆ ಹತ್ತಿರದ ರಸ್ತೆಯಲ್ಲಿ ತಾತ್ಕಾಲಿಕ ಆರೋಗ್ಯ ಘಟಕವನ್ನು ಸ್ಥಾಪಿಸಲಾಗಿದೆ. ಶಿಡ್ಲಘಟ್ಟ ಸೇರಿ ಹತ್ತಿರದ ಹಳ್ಳಿಗಳ ಜನತೆ ಇದರ ಲಾಭ ಪಡೆಯುತ್ತಿದ್ದಾರೆ. ಕಾರ್ಮಿಕರ ಕಾರ್ಡ್, ಇ-ಶ್ರಮ ಕಾರ್ಡ್ ಹೊಂದಿರುವವರು ಸೌಲಭ್ಯ ಪಡೆದುಕೊಳ್ಳಬಹುದು.
ತಾಲೂಕಿನಲ್ಲಿ ವಾರದಲ್ಲಿ ಒಂದು ದಿನ ಸಂಚಾರಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಆಸ್ಪತ್ರೆಗಳ ಕೊರತೆಯನ್ನು ಭರಿಸಲು ಸಹಕಾರಿಯಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ, ತುರ್ತುಚಿಕಿತ್ಸೆ, ಮಕ್ಕಳ ಹಾಗೂ ಮಹಿಳಾ ಆರೋಗ್ಯ ತಪಾಸಣೆ ಸೇರಿ ವಿವಿಧ ವೈದ್ಯಕೀಯ ಸೇವೆಗಳು, ತಜ್ಞ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇವೆ ನೀಡಲಿದ್ದಾರೆ.
ಸ್ಥಳೀಯರು ಆರೋಗ್ಯ ಇಲಾಖೆಯ ನೂತನ ಪ್ರಯತ್ನಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದು, ಸೇವೆಯನ್ನು ವ್ಯಾಪಕವಾಗಿ ಸ್ವಾಗತಿಸಿದ್ದಾರೆ.