

ಕುಶಾಲನಗರ: ಮೀನುಗಾರಿಕೆ ಇಲಾಖೆಯಲ್ಲಿ ಹಿಂದೆ ಏನಾಗಿದೆ ಎನ್ನುವುದರ ಬಗ್ಗೆ ಪರಾಮರ್ಶೆ ಮಾಡದೆ ಮುಂದೆ ಏನು ಆಗಬೇಕು ಎಂಬುದರ ಕುರಿತು ಅಧಿಕಾರಿಗಳ ಜತೆ ಚಿಂತನೆ ನಡೆಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ಸಮೀಪದ ಹಾರಂಗಿ ಮೀನು ಮರಿ ಉತ್ಪದನಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೀನು ಮರಿ ಬೆಳೆಸುವುದು, ನದಿ, ಕೊಳಗಳಿಗೆ ಬಿಡುವುದು, ಸಾರ್ವಜನಿಕರಿಗೆ ಪೂರೈಕೆ ಮಾಡುವುದು ಮೀನುಗಾರಿಕೆ ಇಲಾಖೆ ಕರ್ತವ್ಯ. ಇದಕ್ಕೆ ಪೂರಕವಾಗಿ ಇಲಾಖೆಯಿಂದ ಮೀನು ಮರಿಗಳ ಪಾಲನೆ ಮಾಡಲಾಗುತ್ತಿದೆ. ಹಾರಂಗಿಯಲ್ಲಿ ವಿಶೇಷವಾಗಿ ಅಪರೂಪದ ಮಹಶೀರ್ ಮೀನು ಮರಿಗಳ ಉತ್ಪಾದನೆ ಮಾಡಿ ನದಿಗಳಿಗೆ ಬಿಡುವ ಕಾರ್ಯ ಮಾಡಲಾಗುತ್ತಿದೆ. ಮಹಶೀರ್ ಮೀನು ಕಡೆಗಳಲ್ಲಿ ಬೇರೆ ಮೀನುಗಳು ಇರುವುದಕ್ಕೆ ಅನುಕೂಲಕರ ವಾತಾವರಣ ಇರುತ್ತದೆ ಎನ್ನುವುದು ನಂಬಿಕೆ. ಇದು ನಿಜವೂ ಹೌದು ಎಂದರು.
ಇಲಾಖೆಯಿಂದ ಮೀನುಗಾರಿಕೆಗೆ ಅಗತ್ಯ ಸಹಾಯ ನೀಡಲಾಗುತ್ತಿದೆ. ಮೀನುಗಾರಿಕೆಯನ್ನು ಮಾಡಲು ಯಾರೇ ಮುಂದೆ ಬಂದರೂ ಅವರಿಗೆ ಎಲ್ಲ ನೆರವು ನೀಡಲಾಗುತ್ತದೆ. ಉಚಿತ ಮೀನು ಮರಿ, 5 ಲಕ್ಷ ರೂ.ವರೆಗೆ ಸಬ್ಸಿಡಿ, ಮಹಿಳೆಯರಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದು ಹೇಳಿದರು.
ರಾಜ್ಯವ್ಯಾಪಿ ಸಂಚಾರಿ ಮತ್ಸ್ಯವಾಹಿನಿ ಯೋಜನೆಗೆ ಸಿದ್ಧತೆ ನಡೆಸಲಾಗಿದೆ. 300 ಸಂಚಾರಿ ಮತ್ಸ್ಯ ವಾಹಿನಿಗೆ ಶೀಘ್ರ ಚಾಲನೆ ನೀಡಲಾಗುವುದು. ಬೆಂಗಳೂರು ಒಂದರಲ್ಲೇ 150 ಮತ್ಸ್ಯವಾಹಿನಿ ವಾಹನಗಳು ಇರಲಿವೆ. ಪ್ರತಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ವಾಹನಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಜತೆಗೆ ಸಚಿವರು ಚರ್ಚಿಸಿದರು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಅಧಿಕಾರಿಗಳು ಸಚಿವರ ಗಮನ ಸೆಳೆದರು. ಇದಕ್ಕೂ ಮೊದಲು ಸಚಿವರು ಹಾರಂಗಿ ನದಿಗೆ 2 ಸಾವಿರ ಮಹಶೀರ್ ಮೀನು ಮರಿಗಳನ್ನು ಬಿಟ್ಟರು.
ಶಾಸಕ ಡಾ.ಮಂತರ್‌ಗೌಡ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗಣೇಶ್, ಉಪ ನಿರ್ದೇಶಕ ಸಚಿನ್, ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕಿ ಮಿಲನಾ ಭರತ್, ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ಮಡಿಕೇರಿ ತಾಲೂಕು ಸಹಾಯಕ ನಿರ್ದೇಶಕಿ ಸ್ನೇಹಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಮುಖಂಡರಾದ ಚೆಂಗಪ್ಪ, ಜೋಸೆಫ್ ವಿಕ್ಟರ್ ಸೋನ್ಸ್ ಇದ್ದರು.