

ಹೊಸತನಕ್ಕೆ ಮೈಲನಾಯಕನ ಹೊಸಹಳ್ಳಿ ಸಾಕ್ಷಿ
* ಗ್ರಾಮವನ್ನು ಕಾಯುತ್ತಿರುವ ಕೊಲ್ಲಾಪುರದಮ್ಮ
* ಶಿಕ್ಷಣಕ್ಕೆ ಒತ್ತು, ವಿವಿಧ‘ ಅಧಿಕಾರಿಗಳಿಂದ ಊರಿಗೆ ಗತ್ತು
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಮೈಲನಾಯಕನ ಹೊಸಹಳ್ಳಿಯು ಒಂದು. ರಾಜ್ಯಕ್ಕೆ ಹಲವು ಅಧಿಕಾರಿಗಳನ್ನು ಕೊಡುಗೆಯಾಗಿ ನೀಡಿರುವ ಇತಿಹಾಸ ಈ ಗ್ರಾಮಕ್ಕಿದೆ. ಇದಲ್ಲದೇ ಊರತುಂಬಾ ಪಾಕಪ್ರವೀಣರು (ಅಡುಗೆ ಭಟ್ಟರು) ಇರುವುದು ವಿಶೇಷ.
ಮೈಲನಾಯಕನಹಳ್ಳಿ ಎಂಬ ಗ್ರಾಮವನ್ನು ಕೇಂದ್ರಿಕೃತವಾಗಿಸಿಕೊಂಡು ಈ ಹಿಂದೆ ಮೈಲನಾಯಕ ಎಂಬ ಪಾಳೇಗಾರ ಆಳುತ್ತಿದ್ದ ಎಂಬ ಇತಿಹಾಸವಿದೆ. ಮೈಲನಾಯಕನಹಳ್ಳಿಯ ವಿಸ್ತರಿಸಿದ ಗ್ರಾಮವೇ ಈ ಮೈಲನಾಯಕನ ಹೊಸಹಳ್ಳಿ.
ಎಂ.ಎನ್. ಹೊಸಹಳ್ಳಿ ಎಂದು ಕರೆಯಲಾಗುವ ಈ ಗ್ರಾಮ ಹಲವು ವಿಶೇಷತೆಗಳಿಂದ ತಾಲೂಕಿನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಗ್ರಾಮದ ಹಲವು ಮಂದಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡಿದ್ದಾರೆ. ಈಗಲೂ ಕೆಲವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕ, ‘ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಹೋರಾಟ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಈ ಗ್ರಾಮ ತನ್ನದೇ ಆದ ಹಿರಿಮೆ ಹೊಂದಿದೆ.
ತಾಲೂಕು ಕೇಂದ್ರದಿಂದ ಸುಮಾರು 6 ಕಿಮೀ ದೂರವಿರುವ ಎಂ.ಎನ್. ಹೊಸಹಳ್ಳಿಯಲ್ಲಿ 450ಕ್ಕೂ ಹೆಚ್ಚು ಮನೆಗಳಿದ್ದು, 2500ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಒಕ್ಕಲಿಗರು, ದಲಿತರು, ಗಂಗಮತಸ್ಥರು, ವಿಶ್ವಕರ್ಮರು, ಕುಂಬಾರರು, ಕಾಡುಗೊಲ್ಲರು ಸೇರಿ ವಿವಿಧ ಜಾತಿ ಜನಾಂಗಗಳು ಗ್ರಾಮದಲ್ಲಿ ಸಹಬಾಳ್ವೆಯ ಜೀವನ ಸಾಗಿಸುತ್ತಿವೆ. ಗ್ರಾಮದಲ್ಲಿ ಶಕ್ತಿದೇವತೆ ಕೊಲ್ಲಾಪುರದಮ್ಮ ದೇವಿ ನೆಲೆಸಿದ್ದು, ಗ್ರಾಮದೇವತೆಯನ್ನಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಐದು, ಹತ್ತು ಅಥವಾ ಇಪ್ಪತ್ತು ವರ್ಷಕೊಮ್ಮೆ ದೇವಿಯ ಹಬ್ಬವನ್ನು ಸುಮಾರು ಆರು ದಿನ ವಿಜೃಂಭಣೆಯಿಂದ ಆಚರಿಸುವುದು ಗ್ರಾಮದ ವಿಶೇಷ. ಈ ಹಬ್ಬ ತಾಲೂಕಿನ ಅತಿದೊಡ್ಡ ಊರಬ್ಬಗಳ ಸಾಲಿನಲ್ಲಿ ನಿಂತಿದೆ. ಎಲ್ಲ ಜಾತಿಯ ಜನರು ಒಗ್ಗೂಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇನ್ನೂ ದೀಪಾವಳಿ ಹಬ್ಬದಂದು ಗ್ರಾಮ ದೇವತೆಗಳ ಕರಗ ಮಹೋತ್ಸವ ನಡೆಯಲಿದ್ದು, ದೀಪಗಳ ಹಬ್ಬದಂದು ಬಾಡೂಟ ಈ ಗ್ರಾಮದ ಮತ್ತೊಂದು ವೈಶಿಷ್ಟ್ಯ. ಚೌಡಮ್ಮ, ಕ್ಯಾತಮ್ಮ, ಮಾರಮ್ಮ, ಹುಚ್ಚಮ್ಮ, ಮಾಸ್ತಮ್ಮ, ಆಂಜನೇಯ, ಮುನೇಶ್ವರ, ಶ್ರೀಕೃಷ್ಣ ಸೇರಿ ಹಲವು ದೇವಾಲಯಗಳಿವೆ. ಎಲ್ಲ ಹಬ್ಬಹರಿದಿನಗಳನ್ನು ಗ್ರಾಮದ ಎಲ್ಲ ಸಮುದಾಯದವರು ಶ್ರದ್ಧಾ ಹಾಗೂ ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದೇವತೆ ಕೊಲ್ಲಾಪುರದಮ್ಮ ಗ್ರಾಮವನ್ನು ಕಾಯುತ್ತಿದ್ದಾಳೆ ಎಂಬ ನಂಬಿಕೆ ಗ್ರಾಮದ ಜನರದ್ದು.
ಗ್ರಾಮ ಸುತ್ತಮುತ್ತಲಿನ ಗ್ರಾಮಗಳಿಗೆ ಶೈಕ್ಷಣಿಕ ಕೇಂದ್ರ ಎಂದರೆ ತಪ್ಪಾಗಲಾರದು. ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಶಿಕ್ಷಣದವರೆಗೂ ವ್ಯವಸ್ಥೆಯಿದೆ. ಅಕ್ಕಪಕ್ಕದ ಗ್ರಾಮಗಳ ವಿದ್ಯಾರ್ಥಿಗಳು ಪ್ರೌಢ ಹಾಗೂ ಪಿಯು ವ್ಯಾಸಂಗಕ್ಕೆ ಈ ಗ್ರಾಮವನ್ನು ನೆಚ್ಚಿಕೊಂಡಿದ್ದಾರೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೆ. ಇದಲ್ಲದೇ ಬ್ಯಾಂಕ್ ವ್ಯವಸ್ಥೆಯೂ ಇದೆ. ಈ ಹಿಂದೆ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ಇಲ್ಲಿನ ಹಲವು ಮಂದಿ ವಿವಿ‘ ಇಲಾಖೆಗಳ ಅಧಿಕಾರಿಗಳಾಗಿ ಸೇವೆ ಸಲ್ಲಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಕೃಷಿ, ಹೈನುಗಾರಿಕೆ ಹಾಗೂ ರೇಷ್ಮೆಯನ್ನು ಗ್ರಾಮದ ರೈತರು ನೆಚ್ಚಿಕೊಂಡಿದ್ದು, ಈ ಗ್ರಾಮ ಜನಪರ ಹೋರಾಟಕ್ಕೂ ತನ್ನದೇ ಆದ ಕೊಡುಗೆ ನೀಡಿರುವುದನ್ನು ಯಾರು ಅಲ್ಲಗೆಳೆಯುವಂತಿಲ್ಲ. ಅದರಲ್ಲೂ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಗೆ ಈ ಗ್ರಾಮ ಸಾಕಷ್ಟು ಬಲ ನೀಡಿದ ಇತಿಹಾಸವಿದೆ. ಕನ್ನಡಪರ ಹೋರಾಟದಲ್ಲಿ ‘ಭಾಗವಹಿಸಿ ಗ್ರಾಮದ ಹಲವರು ಬಳ್ಳಾರಿ ಜೈಲುವಾಸ ಸಹ ಅನುಭವಿಸಿದ್ದಾರೆ. ನಮ್ಮ ಗ್ರಾಮದ ಬಗ್ಗೆ ನಮಗೆ ಅಪಾರವಾದ ಹೆಮ್ಮೆಯಿದೆ ಎನ್ನುತ್ತಾರೆ ಕರವೇ ತಾಲೂಕು ಅ‘ಧ್ಯಕ್ಷ ಹೊ.ಪು.ಸಾಗರ್, ಉದ್ಯಮಿಗಳಾದ ಜಗದೀಶ್‌ಹಾಗೂ ಎಂ.ಎ.ಕರುಣ್.
ಗ್ರಾಮದಲ್ಲಿ ಆಡುಗೆ ಭಟ್ಟರು ಹೆಚ್ಚಾಗಿರುವುದು ಈ ಗ್ರಾಮದ ಮತ್ತೊಂದು ವಿಶೇಷ. ಗ್ರಾಮದ ಹಲವರು ಸಸ್ಯಹಾರಿ ಮತ್ತು ಮಾಂಸಹಾರಿ ಎರಡು ವಿಭಾಗದಲ್ಲಿಯೂ ಪಾಕಪ್ರವೀಣರಾಗಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಈ ಹಿಂದೆ ತಾಲೂಕಿನ ಪ್ರಮುಖ ಬಾಣಸಿಗರಾದ ಕೋಟೆ ಶ್ರೀಧರ್, ಕೋಮನಹಳ್ಳಿ ವೆಂಕಟೇಶ್ ಹಾಗೂ ಮಳೂರುಪಟ್ಟಣದ ದಿವಂಗತ ಜವರೇಗೌಡರ ಹತ್ತಿರ ಗ್ರಾಮದ ಹಲವರು ಕೆಲಸ ಕಲಿತು ತದನಂತರ, ತಮ್ಮದೇ ಆದ ತಂಡ ಕಟ್ಟಿಕೊಂಡು ಆಹಾರ ತಯಾರಿಕಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಗ್ರಾಮದಲ್ಲಿ ಬರೋಬರಿ 100ಕ್ಕೂ ಅಧಿಕ ಮಂದಿ ಬಾಣಸಿಗರಿದ್ದಾರೆ. ಅಡುಗೆಯವರು ಎಂದರೆ ಎಂ.ಎನ್.ಹೊಸಹಳ್ಳಿ ಎನ್ನುವಷ್ಟರ ಮಟ್ಟಿಗೆ ಗ್ರಾಮದ ಕೀರ್ತಿ ಪಸರಿಸಿದ್ದಾರೆ.