ಎನ್‌ಇಪಿ ರದ್ದುಪಡಿಸಬಾರದು ಎಂದು ನಮೋಶಿ

Shashil Namoshi
Published on

ಕಲಬುರಗಿ: ರಾಜ್ಯ ಸರ್ಕಾರ ರಾಷ್ಟಿಯ ಶಿಕ್ಷಣ ನೀತಿಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಆಗ್ರಹಿಸಿದರು.
ಈ ನೀತಿ ಅಡಿ ವ್ಯಾಸಂಗ ಮಾಡಿರುವ ಉನ್ನತ ಶಿಕ್ಷಣದ ಎರಡು ಬ್ಯಾಚ್‌ನ ವಿದ್ಯಾರ್ಥಿಗಳು ಅತಂತ್ರವಾಗಲಿದ್ದಾರೆ. ಶೈಕ್ಷಣಿಕ ಸಮುದಾಯದಲ್ಲಿ ಅನಗತ್ಯ ಗೊಂದಲ ನಿರ್ಮಾಣವಾಗಲಿದೆ. ಶೈಕ್ಷಣಿಕ ಸುಧಾರಣೆ ವೇಗ ಕುಂಠಿತಗೊಳ್ಳುತ್ತದೆ. ಹಲವು ವರ್ಷಗಳಿಂದ ಹಾಕಿರುವ ಶ್ರಮ, ಸಮಯ ಮತ್ತು ಹಣ ವ್ಯರ್ಥವಾಗಲಿದೆ ಎಂದು ಹೇಳಿದರು.
ಈ ಕುರಿತು ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮೋಶಿ, ಕೇಂದ್ರ ಬಿಜೆಪಿ ಸರ್ಕಾರ ಎನ್‌ಇಪಿ ಜಾರಿಗೆ ತಂದಿದೆ ಎಂಬ ಕಾರಣಕ್ಕಾಗಿ, ರಾಜಕೀಯ ದ್ವೇಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ನೀತಿ ರದ್ದು ಮಾಡಲು ಹೊರಟಿದೆ. ಕಲಿಕೆ, ಕೌಶಲ, ವೃತ್ತಪರತೆ, ಮೌಲ್ಯ, ಪಠ್ಯೇತರ ಚಟುವಟಿಕೆಗೆ ಒತ್ತು ನೀಡುವ ಎನ್‌ಇಪಿ ವಿರೋಧಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಕಾರಣಗಳಿಲ್ಲ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಬಡವರ ಮಕ್ಕಳಿಗೆ ಅನ್ಯಾಯ ಮಾಡುವುದು ತರವಲ್ಲ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದಿದ್ದರೆ ನಮ್ಮ ದೇಶದ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿದರು.

ಶಿಕ್ಷಣದಲ್ಲಿ ಕೌಶಲ ಅಳವಡಿಕೆ: ನಿರುದ್ಯೋಗ ಸಮಸ್ಯೆಗೆ ಕೌಶಲದ ಕೊರತೆ ಕಾರಣ. ಮಾರುಕಟ್ಟೆಯ ಅಗತ್ಯತೆಗೆ ತಕ್ಕಂತೆ ಶಿಕ್ಷಣ ನೀಡಲಾಗುತ್ತಿಲ್ಲ. ಹೀಗಾಗಿ ಶಾಲಾ ಶಿಕ್ಷಣ ಹಂತದಲ್ಲೇ ಮಕ್ಕಳಿಗೆ ವೃತ್ತಿಪರ ಶಿಕ್ಷಣ, ಕೌಶಲ ನೀಡುವುದನ್ನು ಎನ್‌ಇಪಿ ಪ್ರತಿಪಾದಿಸಿದೆ. ೬ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣ ಆರಂಭಿಸುವ ಶಿಫಾರಸು ಎನ್‌ಇಪಿ ಒಳಗೊಂಡಿದೆ. ಶಿಕ್ಷಣದ ಜತೆಗೆ ಕೌಶಲ ಹೊಂದುವುದು ಎನ್‌ಇಪಿ ಆಶಯ. ಸ್ಥಳೀಯವಾಗಿ ಲಭ್ಯವಾಗುವ, ಸೃಷ್ಟಿಸಬಹುದಾದ ಉದ್ಯೋಗ ಮಾಡಲು ಬೇಕಾದ ಕೌಶಲ ಶಾಲಾ ಶಿಕ್ಷಣ ಹಂತದಲ್ಲೇ ನೀಡಬೇಕು ಎಂಬುದು ನೀತಿಯ ಆಶಯ ಎಂದರು.

ಸಮಾನ ಶಿಕ್ಷಣ: ವೈಜ್ಞಾನಿಕ ಕಲಿಕಾ ವಿಧಾನಗಳು ನಿರ್ಧಾರಿತ ಗುಣಮಟ್ಟದ ಮೂಲಸೌಲಭ್ಯ ಮತ್ತು ಕಟ್ಟಡ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ಎನ್‌ಇಪಿ ಸೂಚಿಸಿದೆ. ಇದರಿಂದ ಮಗುವಿಗೆ ಮೂರು ವರ್ಷ ಮೀರುತ್ತಿದ್ದಂತೆ ಖಾಸಗಿ ಕೇಂದ್ರಗಳಿಗೆ ತೆರಳುವ ಮಕ್ಕಳಂತೆ ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯಲಿದೆ. ಹಾಗೊಂದು ವೇಳೆ ಎನ್‌ಇಪಿ ರದ್ದುಪಡಿಸಿದರೆ ಶಿಕ್ಷಣದಲ್ಲಿ ತಾರತಮ್ಯ ಮುಂದುವರಿಸಿದAತಾಗಲಿದೆ. ಶ್ರೀಮಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉಳಿದವರ ಮಕ್ಕಳಿಗೆ ಭವಿಷ್ಯದ ಆಲೋಚನೆ ಇಲ್ಲದ ಶಿಕ್ಷಣ ನೀಡದಂತಾಗಲಿದೆ ಎಂದು ವಿವರಿಸಿದರು.

ಶಾಲೆ ಬಲಪಡಿಸುವುದು: ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶ ಕಡಿಮೆಯಾಗುತ್ತಿದೆ. ಮಕ್ಕಳ ಸಂಖ್ಯೆ ಕೊರತೆಯಿಂದಾಗಿ ಶಾಲೆ ಮುಚ್ಚಲಾಗುತ್ತಿದೆ. ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಸರ್ಕಾರಿ ಶಾಲೆಗಳ ವ್ಯವಸ್ಥೆ ಬಲಪಡಿಸಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸುವ ಧನಾತ್ಮಕ ಅಂಶಗಳನ್ನು ಎನ್‌ಇಪಿ ಹೊಂದಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶಾಲಾ ಶಿಕ್ಷಣ ಒಂದನೇ ತರಗತಿಯಿಂದ ಶುರುವಾಗುತ್ತಿದೆ ಎಂದರು.
ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಶರಣು ಸಜ್ಜನ್, ಅಣವೀರ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net