ಸುನೀಲ ಹೆಗಡೆ ಸೋಲಿಸುವುದೇ ಗುರಿ

GHOTNEKAR
Published on

ವಿಜಯವಾಣಿ ಸುದ್ದಿಜಾಲ ಹಳಿಯಾಳ: ಮಾಜಿ ಶಾಸಕ ಸುನೀಲ ಹೆಗಡೆ ಸೋಲಿಸುವುದೇ ಈಗ ನನ್ನ ಜೀವನದ ಏಕೈಕ ಗುರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಕಿಡಿಕಾರಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಶಿವರಾಮ ಹೆಬ್ಬಾರ ಆಯ್ಕೆಯಾದ ಕಾರಣ ಬಿಜೆಪಿಯವರು ಹಳಿಯಾಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅದು ವಿಶೇಷ ಅಲ್ಲ. ಆದರೆ, ಮಾಜಿ ಶಾಸಕ ಸುನೀಲ ಹೆಗಡೆ ಬೆಂಬಲಿಗರು ನನ್ನ ಮನೆಯ ಮುಂದೆಯೇ ಪಟಾಕಿ ಹೊಡೆದು ವಿಕಟ ಸಂತೋಷ ಅನುಭವಿಸಿದ್ದಾರೆ. ಇದು ನನಗೆ ನೋವುಂಟು ಮಾಡಿದೆ ಎಂದು ಹೇಳಿದರು.

ನನ್ನ ರಾಜಕೀಯ ಜೀವನದಲ್ಲಿ ಈಗ ಒಂದು ಅಂಶದ ಗುರಿಯನ್ನು ಹಾಕಿ ಕೊಂಡಿದ್ದೇನೆ. ಸುನೀಲ ಹೆಗಡೆ ಅಥವಾ ಅವರ ಬೆಂಬಲಿಗರು ಎಲ್ಲಿಯೇ ಚುನಾವಣೆಗೆ ನಿಲ್ಲಲಿ, ಅವರನ್ನು ಸೋಲಿಸುವುದು ನನ್ನ ಗುರಿ. ಇದು ಮರಾಠನಾದ ನನ್ನ ಪ್ರತಿಜ್ಞೆ. ನನ್ನ ಆಸ್ತಿ ಮಾರಾಟ ಮಾಡಿಯಾದರೂ ಅವನನ್ನು ಸೋಲಿಸುತ್ತೇನೆ. ನಾನು ಅವನನ್ನು ಸೋಲಿಸಿ, ಅವನ ಮನೆಯ ಮುಂದೆಯೇ ಪಟಾಕಿ ಹಚ್ಚುತ್ತೇನೆ; ಇದು ನನ್ನ ಚಾಲೆಂಜ್ ಎಂದರು.

ಗೆಳೆಯನಿಗೆ ಬೆಂಬಲ: ಸಚಿವ ಶಿವರಾಮ ಹೆಬ್ಬಾರ ಹಾಗೂ ನನ್ನ ದೋಸ್ತಿ ಮೂವತ್ತೈದು ವರ್ಷಗಳ ಹಿಂದಿನದು. ನಮ್ಮ ಮಿತ್ರತ್ವಕ್ಕೆ ಎಂದೂ ರಾಜಕಾರಣ ಅಡ್ಡಯಾಗಲಿಲ್ಲ, ಕೆಡಿಸಿಸಿ ಬ್ಯಾಂಕಿನಲ್ಲಿ ನಾನು ಮೂವತ್ತೊಂದು ವರ್ಷ ಸೇವೆ ಸಲ್ಲಿಸಿದ್ದು, 16 ವರ್ಷ ಅಧ್ಯಕ್ಷನಾಗಿ, 3 ವರ್ಷ ಉಪಾಧ್ಯಕ್ಷರಾಗಿ ಕಾರ್ಯ ಮಾಡಿದ್ದೇನೆ. ನಾಲ್ಕನೇ ಬಾರಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವುದಕ್ಕೆ ಬಯಸಿದ್ದೆ. ಸ್ಪರ್ಧಿಸಲು ತೀರ್ವನಿಸಿದ್ದೆ.

ಆದರೆ, ಚುನಾವಣೆಯ ಎರಡು ದಿನ ಮುನ್ನ ಹೆಬ್ಬಾರ ಅವರು ಅಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದರು.ನಮ್ಮ ಗೆಳೆತನ ಒಡನಾಟದಿಂದ ನಾನು ಅವರಿಗೆ ಬೆಂಬಲವನ್ನು ಸೂಚಿಸಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಬಾಳಕೃಷ್ಣ ಶಹಾಪುರಕರ, ಅಬ್ದುಲ್ ದಲಾಲ್, ಅನಿಲ ಚವ್ಹಾಣ, ಅಶೋಕ ಘೊಟ್ನೇಕರ, ತುಕಾರಾಮ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net