

ಯಲ್ಲಾಪುರ: ತಾಲೂಕಿನ ದೇಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಂಬ್ರಾಳ ಜಲಪಾತಕ್ಕೆ ಹೋಗಲು ಮರಗಳ ಮಾರಣಹೋಮ ನಡೆಸಿ ರಸ್ತೆ ನಿರ್ವಿುಸಿದ ಸ್ಥಳಕ್ಕೆ ಭಾನುವಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಪುರ ತೂಗು ಸೇತುವೆಯ ಬಳಿಯಿಂದ ಕುಂಬ್ರಾಳ ಜಲಪಾತದವರೆಗೆ ಮಾಡಲಾದ ರಸ್ತೆಯಲ್ಲಿ ತೆರಳಿ, ಮರಗಳನ್ನು ಕಡಿದು ಎಸೆದ ಬಗೆಗೆ ಖೇದ ವ್ಯಕ್ತಪಡಿಸಿದರು. ಈ ಕುರಿತು ಸ್ಥಳದಲ್ಲಿ ಉಪಸ್ಥಿತರಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಘಟನೆಯ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾ.ಪಂ ಅಧ್ಯಕ್ಷ ಶ್ರೀಪತಿ ಮುದ್ದೆಪಾಲ, ಎಸಿಎಫ್ ಅಶೋಕ ಭಟ್ಟ, ಗ್ರಾಮಸ್ಥರಾದ ಸತೀಶ ಕಟ್ಟಿಗೆ, ಶಂಕರ ಸಿದ್ದಿ, ಮಂಜುನಾಥ ಮೆಣಸುಮನೆ ಇತರರಿದ್ದರು.
ತೂಗು ಸೇತುವೆಯ ಬಳಿಯಿಂದ ಜಲಪಾತದವರೆಗೆ ಮರಗಳನ್ನು ಕಡಿದು ರಸ್ತೆ ಮಾಡಲಾಗಿದೆ. ಮೇಲ್ನೋಟಕ್ಕೆ ಒಂದಷ್ಟು ಮರಗಳನ್ನು ಕಡಿದಿರುವುದು ಕಂಡು ಬರುತ್ತಿದ್ದು, ರಸ್ತೆಯಡಿ ಇನ್ನು ಎಷ್ಟು ಮರಗಳನ್ನು ಹಾಕಲಾಗಿದೆಯೋ ತಿಳಿದಿಲ್ಲ. ಜಲಪಾತಕ್ಕೆ ರಸ್ತೆಯ ಅಗತ್ಯವಿದ್ದರೆ ಗ್ರಾ.ಪಂ, ಅರಣ್ಯ ಇಲಾಖೆಯವರು ಜತೆಯಲ್ಲಿ ರ್ಚಚಿಸಿ ಕಾರ್ಯಯೋಜನೆ ರೂಪಿಸಬಹುದಿತ್ತು. ಅದನ್ನು ಬಿಟ್ಟು ಏಕಾಏಕಿ ಮರಗಳನ್ನು ಕಡಿದು ರಸ್ತೆ ನಿರ್ವಿುಸಿರುವುದು ಸರಿಯಲ್ಲ. ಜಲಪಾತವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಹಿನ್ನೀರನ್ನು ಕೃಷಿಗೆ ಬಳಸುವ ರೈತರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಸ್ಥಳೀಯರು ಇದನ್ನು ವಿರೋಧಿಸುತ್ತಿದ್ದಾರೆ. ಈ ಕುರಿತು ಉಸ್ತುವಾರಿ ಸಚಿವರಿಗೂ ಮಾಹಿತಿ ನೀಡಿದ್ದೇನೆ. ಅವರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.| ಶಾಂತಾರಾಮ ಸಿದ್ದಿ, ಎಂಎಲ್ಸಿ