

ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರ
| ಪರಶುರಾಮ ಭಾಸಗಿ ವಿಜಯಪುರ
ಮೇಲ್ಮನೆ ಹಾಗೂ ಕೆಳಮನೆ ಪ್ರತಿಪಕ್ಷ ನಾಯಕರನ್ನು ಹೊಂದಿರುವ ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರ ರಾಜ್ಯದ ಪಾಲಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ಗೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಕಣದಿಂದ ದೂರ ಸರಿದರೂ ಎಸ್.ಆರ್.ಪಾಟೀಲ್ಗೆ ಪಕ್ಷದ ಏಕೈಕ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಗೆಲ್ಲಿಸುವ ಸಂದಿಗ್ಧತೆ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಕೂಡ ಕೈ ಅಭ್ಯರ್ಥಿ ಗೆಲುವಿಗೆ ಬೆವರಿಳಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳೆರಡೂ ಏಕೈಕ ಅಭ್ಯರ್ಥಿ ಕಣಕ್ಕಿಳಿಸಿ, ಅವಿರೋಧ ಆಯ್ಕೆಗೆ ನಡೆಸಿದ ಯತ್ನ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಯಿಂದ ವಿಫಲಗೊಂಡಿದೆ. ಕಾಂಗ್ರೆಸ್ನಿಂದ ಹಾಲಿ ಸದಸ್ಯ ಸುನೀಲಗೌಡ ಪಾಟೀಲ್, ಬಿಜೆಪಿಯಿಂದ ಪಿ.ಎಚ್. ಪೂಜಾರ ಸ್ಪರ್ಧಿಸಿದ್ದಾರೆ. ಇವರಿಗೆ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಒಟ್ಟು ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಕ್ಷಗಳ ಬಲಾಬಲ: ಅವಳಿ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಪಾಟೀಲರ ಶಕ್ತಿ ಅಗಾಧವಾಗಿದೆ. ಕಾಂಗ್ರೆಸ್ನ ಐವರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರಿದ್ದಾರೆ. ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಮಾಜಿ ಸಚಿವ ಹಾಗೂ ಶಾಸಕ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಶಾಸಕ ಯಶವಂತರಾಯಗೌಡ ಪಾಟೀಲ್, ಆನಂದ ನ್ಯಾಮಗೌಡ ಕಾಂಗ್ರೆಸ್ನ ಶಕ್ತಿಯಾಗಿದ್ದಾರೆ. ಎಸ್.ಆರ್.ಪಾಟೀಲ್ ಕಣದಿಂದ ಹಿಂದೆ ಸರಿದ ಕಾರಣಕ್ಕೆ ಆರಂಭದಲ್ಲಿದ್ದ ಅಸಮಾಧಾನ ಆಕ್ರೋಶ ಇದೀಗ ಶಮನಗೊಂಡಿದೆ. ಆಂತರಿಕ ಅಸಮಾಧಾನ ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿಯಲ್ಲಿ ಅವಳಿ ಜಿಲ್ಲೆಯ ಇಬ್ಬರು ಸಂಸದರು, 9 ಶಾಸಕರು, ಇಬ್ಬರು ಪರಿಷತ್ ಸದಸ್ಯರು, ಮೂವರು ನಿಗಮ ಮಂಡಳಿ ಅಧ್ಯಕ್ಷರು ಇದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಪರ ಇಡೀ ಗಾಣಿಗ ಸಮುದಾಯ ನಿಂತಿದ್ದು, ಕೆಲವರು ರಾಷ್ಟ್ರೀಯ ಪಕ್ಷಗಳಲ್ಲಿದ್ದರೂ ತೆರೆ ಮರೆಯಲ್ಲಿ ಲೋಣಿಗೆ ಸಾಥ್ ನೀಡುತ್ತಿರುವುದು ಕೈ-ಕಮಲ ಅಭ್ಯರ್ಥಿಗಳ ಸುಲಭ ಗೆಲುವಿಗೆ ಅಡ್ಡಿಯಾಗಿದ್ದಾರೆ.
ಸುನೀಲಗೌಡ ಪಾಟೀಲ್ ಕೂಡು ವಕ್ಕಲಿಗ ಸಮುದಾಯಕ್ಕೆ ಸೇರಿದ್ದರೆ ಪಿ.ಎಚ್. ಪೂಜಾರ ರೆಡ್ಡಿ ಸಮುದಾಯದವರು. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ -ಗಾಣಿಗ, ಇನ್ನುಳಿದಂತೆ, ಕಾಂತಪ್ಪ ಇಂಚಗೇರಿ ಹಾಗೂ ದುರಗಪ್ಪ ಭರಮಪ್ಪ ಸಿದ್ದಾಪುರ- ಕುರುಬ, ಮಲ್ಲಿಕಾರ್ಜುನ ಕೆಂಗನಾಳ ಹಾಗೂ ಶ್ರೀಮಂತ ಬಾರಿಕಾಯಿ- ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದ ಇತಿಹಾಸ ಗಮನಿಸಿದರೆ ಗಾಣಿಗ, ಪಂಚಮ ಸಾಲಿ ಹಾಗೂ ರೆಡ್ಡಿ ಸಮುದಾಯ ಹೆಚ್ಚಾಗಿ ಪ್ರತಿನಿಧಿಸಿದೆ. ಪ್ರಾದೇಶಿಕ ಲೆಕ್ಕಾಚಾರದಡಿ ವಿಜಯಪುರ ಜಿಲ್ಲೆಯ ವಿಭಜನೆ ನಂತರ ಬಾಗಲಕೋಟೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಸದ್ಯಕ್ಕೆ ವಿಜಯಪುರ ಜಿಲ್ಲೆ-5, ಬಾಗಲಕೋಟೆ-2 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡೂ ಜಿಲ್ಲೆಯಲ್ಲಿ ಗಾಣಿಗ ಸಮುದಾಯದ ಮತಗಳು ಹೆಚ್ಚಿರುವುದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿಗೆ ಪ್ಲಸ್ ಪಾಯಿಂಟ್. ಇನ್ನು ಕುರುಬ ಹಾಗೂ ಪಂಚಮಸಾಲಿ ಮತಗಳು ಆ ಸಮುದಾಯದ ಇಬ್ಬರು ಅಭ್ಯರ್ಥಿಗಳಲ್ಲಿ ಹರಿದು ಹಂಚಿ ಹೋಗುವುದು ಸಾಮಾನ್ಯ.
ತ್ರಿಕೋನ ಸ್ಪರ್ಧೆ: 2018ರ ಉಪ ಚುನಾವಣೆಯಲ್ಲಿ 2040 ಮತಗಳ ಅಂತರದಿಂದ ಜಯ ಸಾಧಿಸಿದ್ದ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಸುನೀಲಗೌಡರ ಪಾಟೀಲ್, ಈ ಬಾರಿಯೂ ಗೆಲುವಿನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಅಖಂಡ ವಿಜಯಪುರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಶಾಸನಸಭೆ ಸದಸ್ಯರಾಗಿ ಸೇವೆಸಲ್ಲಿಸಿರುವ ಪಿ.ಎಚ್. ಪೂಜಾರ ಗೆಲುವಿಗಾಗಿ ಅವಳಿ ಜಿಲ್ಲೆಯ ಜನಪ್ರತಿನಿಧಿಗಳನ್ನೇ ನೆಚ್ಚಿಕೊಂಡಿದ್ದಾರೆ. ಮಲ್ಲಿಕಾರ್ಜುನ ಲೋಣಿ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿದ್ದಾರೆ.
2018ರ ಉಪ ಚುನಾವಣೆ: ಬಸನಗೌಡ ಪಾಟೀಲ್ ಯತ್ನಾಳ ರಾಜೀನಾಮೆಯಿಂದಾಗಿ 2018ರಲ್ಲಿ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ್ 4819 ಪ್ರಥಮ ಪ್ರಾಶಸ್ತದ ಮತ ಪಡೆದು ಭರ್ಜರಿ ಜಯ ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ 2779 ಮತ ಪಡೆದು ಪರಾಭವಗೊಂಡಿದ್ದರು. ಐವರು ಪಕ್ಷೇತರ ಅಭ್ಯರ್ಥಿಗಳು 20ಕ್ಕಿಂತಲೂ ಅಧಿಕ ಮತ ಪಡೆದಿರಲಿಲ್ಲ.
ಬಾಗಲಕೋಟೆ: ನಾನು ಐದಾರು ಸಲ ಎಂಎಲ್ಎ ಆಗಿದ್ದೀನಿ... ಸಚಿವ ಸಹ ಆಗಿದ್ದವನು. ನನ್ನ ಕ್ಷೇತ್ರದಲ್ಲಿ ಬಂದು ನೀವು ಸ್ಪರ್ಧೆ ಮಾಡಿದ್ರಿ... ಚಾಮುಂಡಿಯಲ್ಲಿ ಗೆಲ್ಲುವ ಯೋಗ್ಯತೆ ಇಲ್ಲ ಅಂದ್ರೆ ಏಕೆ ಅಲ್ಲಿ ನಿಲ್ಲಬೇಕಿತ್ತು. ವರುಣದಲ್ಲಿ ಮಗನ ಬದಲು ಇವರೇ ನಿಂತಿದ್ರೆ ಗೆಲ್ಲುತ್ತಿದ್ದರು. ಅದನ್ನು ಬಿಟ್ಟು ನಮಗೆ ಗಂಟು ಬಿದ್ದಾರ.... ನಮ್ಮ ಪರಿಸ್ಥಿತಿ ಹುಲಿ ಹೋಗಿ ಇಲಿ ಆಗಿದೆ.
ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಎದುರೇ ಮೈಕ್ ಹಿಡಿದು ಗುಡುಗಿದ್ದು ಬಾದಾಮಿ ಕ್ಷೇತ್ರದ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ಸಿಗ ಬಿ.ಬಿ.ಚಿಮ್ಮನಕಟ್ಟಿ.
ಪರಿಷತ್ ಚುನಾವಣೆ ಹಿನ್ನೆಲೆ ಬಾದಾಮಿಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಎದುರಲ್ಲಿ ಚಿಮ್ಮನಕಟ್ಟಿ ತಮ್ಮ ಬಹುದಿನಗಳ ಆಕ್ರೋಶವನ್ನು ಹೊರಹಾಕಿದರು. ಸಿದ್ದರಾಮಯ್ಯ ವಿರುದ್ಧ ಹರಿಹಾಯಲು ಆರಂಭಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿ ಅನೇಕ ಮುಖಂಡರು ಧಾವಿಸಿ ಕೈಮುಗಿದರೂ ಚಿಮ್ಮನಕಟ್ಟಿ ಕ್ಯಾರೇ ಅನ್ನಲಿಲ್ಲ. ಏಕಾಏಕಿ ತಮ್ಮ ವಿರುದ್ಧ ಚಿಮ್ಮನಕಟ್ಟಿ ಏಕವಚನದಲ್ಲೇ ತೀವ್ರ ವಾಗ್ದಾಳಿ ಆರಂಭಿಸಿದ್ದರಿಂದ ಕಕ್ಕಾಬಿಕ್ಕಿಯಾದ ಸಿದ್ದರಾಮಯ್ಯ, ಏನೊಂದು ಮಾತನಾಡದೆ ಮೌನವಾಗಿದ್ದು ಮುಜುಗರ ಅನುಭವಿಸುವಂತಾಯಿತು. ‘ಮುಂದಿನ ಸಲ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ನಾನು ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತೇನೆ. ನಾನು ಇಲ್ಲಿ ಗೆದ್ದು ಎಂಎಲ್ಎ, ಮಂತ್ರಿ, ಸಿಎಂ ಸಹ ಆಗುತ್ತೇನೆ’ ಎಂದ ಚಿಮ್ಮನಕಟ್ಟಿ, ‘ನಾನು ಕ್ಷೇತ್ರ ಬಿಟ್ಟು ಕೊಟ್ಟಿದ್ದಕ್ಕೆ ನನಗೆ ಎಂಎಲ್ಸಿ ಮಾಡುತ್ತೇನೆ ಎಂದಿದ್ದರು. ಅದನ್ನು ಮಾಡಿದ್ರಾ? ನಾನು ಇಲ್ಲಿ ಎಷ್ಟು ನೋವು ಅನುಭವಿಸಿದ್ದೇನೆ ಎನ್ನುವುದು ನನಗೆ ಗೊತ್ತು’ ಎಂದು ಸಿದ್ದರಾಮಯ್ಯ ವಿರುದ್ಧ ಮಾತನಾಡಬೇಡಿ ಎಂದು ಮನವಿ ಮಾಡಲು ಬಂದ ಕಾಂಗ್ರೆಸ್ ಮುಖಂಡರ ಎದುರು ಆಕ್ರೋಶ ಹೊರಹಾಕಿದರು.
ಹಿಂದೆಯೂ ಆಕ್ರೋಶ: ಕೆಲ ತಿಂಗಳುಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಚಿಮ್ಮನಕಟ್ಟಿ ಹೀಗೆಯೇ ಏಕವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಬಾದಾಮಿಯಿಂದಲೇ ಸ್ಪರ್ಧೆ: ಸೋಮವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಸಿದ್ದರಾಮಯ್ಯ, ಬಾದಾಮಿ ಜನರು ಕರೆಯುತ್ತಾರೆ. ಹೀಗಾಗಿ ನಾನು ಇಲ್ಲೇ ಸ್ಪರ್ಧಿಸುತ್ತೇನೆ ಎಂದಿದ್ದರು. ಈಶ್ವರಪ್ಪ, ಸಿದ್ದರಾಮಯ್ಯ ಚಾಮರಾಜಪೇಟೆಯಲ್ಲಿ ಕೈಮುಗಿದು ನಿಲ್ಲಬೇಕಾಗುತ್ತೆ ಎಂದಿದ್ದ ಹೇಳಿಕೆಗೆ ಸಿಡಿಮಿಡಿಗೊಂಡಿದ್ದ ಅವರು, ‘ಯಾರೀ ಈಶ್ವರಪ್ಪ? ಅವರನ್ನು ಕೇಳಿ ನಾನು ನಿಲ್ಲಬೇಕಾ? ಬಾದಾಮಿ ಜನರು ಕರೆಯುತ್ತಾರೆ. ಇಲ್ಲಿಯೇ ನಿಂತು ಕೊಳ್ಳುತ್ತೇನೆ’ ಎಂದಿದ್ದರು. ಸಿದ್ದು ಅವರ ಈ ಹೇಳಿಕೆ ಸಹ ಚಿಮ್ಮನಕಟ್ಟಿ ಅವರನ್ನು ಕೆರಳಿಸಿರಲಿಕ್ಕೂ ಸಾಕು. ಇದಾದ 1-2 ಗಂಟೆಯಲ್ಲೆ ಸಿದ್ದರಾಮಯ್ಯ ಬಾದಾಮಿ ಸ್ಪರ್ಧೆ ವಿರುದ್ಧ ಚಿಮ್ಮನಕಟ್ಟಿ ತಮ್ಮ ಅಸಮಾಧಾನ ಜೋರಾಗಿಯೇ ಹೊರಹಾಕಿದ್ದಾರೆ.
ರಾಜಕೀಯ ರಕ್ಷಣೆ ಕೋರಿದ ಸಿದ್ದು: ಚಿಮ್ಮನಕಟ್ಟಿ ಬಳಿಕ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇನ್ನು ಚಿಮ್ಮನಕಟ್ಟಿ ಅವರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯ ಮಾಡಿದರು. ಪ್ರಸ್ತುತ ರಾಜಕೀಯದಲ್ಲಿ ಎಲ್ಲರೂ ತಮಗೆ ಹೊಡೆತ ಕೊಡುತ್ತಿದ್ದಾರೆ. ನೀವೇ ನನಗೆ ರಕ್ಷಣೆ ನೀಡಬೇಕು ಎಂದು ಬಾದಾಮಿ ಜನರನ್ನು ಮತ್ತೆ ಮತ್ತೆ ಕೋರಿದ್ದು ನಾನಾ ಅರ್ಥ ಕಲ್ಪಿಸುವಂತಿತ್ತು. ‘ನನ್ನ ಪರಿಸ್ಥಿತಿ ಏನಾಗಿದೆ ಅಂದರೆ ಒಂದು ಕಡೆಗೆ ಜೆಡಿಎಸ್ ಹೊಡೆತ. ಮತ್ತೊಂದು ಕಡೆಗೆ ಬಿಜೆಪಿ, ಆರ್ಎಸ್ಎಸ್ ಹೊಡೆತ. ನೀವು ನನ್ನ ರಕ್ಷಣೆಗೆ ಇರುತ್ತೀರಿ ಅಲ್ವಾ?’ ಎಂದು ಮತ್ತೆ ಮತ್ತೆ ಪ್ರಶ್ನೆ ಮಾಡಿದರು. ಇದೇನು ಚಿಮ್ಮನಕಟ್ಟಿ ಅವರಿಗೆ ನೀಡಿರುವ ತಿರುಗೇಟಾ ಎನ್ನುವುದು ಚರ್ಚೆಗೆ ನಾಂದಿ ಹಾಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಬಾದಾಮಿಯನ್ನು ನಂಬರ್ 1 ಮಾಡುತ್ತಿದ್ದೆ. ಯಾವುದಕ್ಕೂ ದುಡ್ಡು ಇಲ್ಲ ಅಂತ ಹೇಳುತ್ತಾರೆ. ಸಿದ್ದರಾಮಯ್ಯ ಯಾವ ಕಾಂಟ್ರಾಕ್ಟರ್ ಕಡೆ 5 ಪೈಸೆ ಲಂಚ ತೆಗೆದುಕೊಂಡಿದ್ದಾನೆ ಅಂತ ಸಾಬೀತು ಮಾಡಿ. ಆವತ್ಥೇ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ.
| ಸಿದ್ದರಾಮಯ್ಯ ಮಾಜಿ ಸಿಎಂ
ಅಬ್ದುಲ್ ಕಲಾಂ ಅವರಿಗೆ ಪ್ರಧಾನಿ ಆಗುವಂತೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದರು. ಆದರೆ ಅಬ್ದುಲ್ ಕಲಾಂ ಅವರು ನನಗೆ ಬೇಡ. ನೀವೇ ಪ್ರಧಾನಿಯಾಗಿ ಎಂದಿದ್ದರು. ಬಳಿಕ ಮನಮೋಹನ್ ಸಿಂಗ್ರನ್ನು ಪ್ರಧಾನಿ ಮಾಡಲಾಯಿತು. ನಾನು ತಿಹಾರ್ ಜೈಲಿಗೆ ಹೋಗಿದ್ದ ಬಗ್ಗೆ ಈಶ್ವರಪ್ಪ ಹೇಳಿಕೆ ಗಮನಿಸಿದೆ. ಬಿಜೆಪಿಗೆ ನಾನು ಬೆಂಬಲ ನೀಡಲಿಲ್ಲ ಎಂಬ ಕಾರಣಕ್ಕೆ ಜೈಲಿಗೆ ಕಳುಹಿಸಿದಿರಲ್ಲಾ? ರಾಜ್ಯದಲ್ಲಿ ಕಾಂಗ್ರೆಸ್ ಒಮ್ಮತದಿಂದ ಕೆಲಸ ಮಾಡುತ್ತಿದೆ.
| ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ