

ಧಾರವಾಡ ದ್ವಿಸದಸ್ಯ ವಿಧಾನಪರಿಷತ್ ಕ್ಷೇತ್ರ
| ಪರಶುರಾಮ ಕೆರಿ ಹಾವೇರಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ನೆಲೆ ಕಲ್ಪಿಸಿದ್ದು ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯ ಧಾರವಾಡ ವಿಧಾನಪರಿಷತ್ ಕ್ಷೇತ್ರ. ದ್ವಿಸದಸ್ಯ ಕ್ಷೇತ್ರವಾಗಿರುವ ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆಯಿದ್ದರೂ ಉಭಯ ಪಕ್ಷಗಳು ತಲಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಗೆಲುವಿನ ಅಂತರಕ್ಕಷ್ಟೇ ಪೈಪೋಟಿ ಏರ್ಪಟ್ಟಿದೆ. ಪಕ್ಷೇತರ ಅಭ್ಯರ್ಥಿಯಾಗಿ ಹಾವೇರಿ ಎಪಿಎಂಸಿ ಅಧ್ಯಕ್ಷರೊಬ್ಬರು ಸ್ಪರ್ಧಿಸಿದ್ದು, ಅವರು ಸೆಳೆಯುವ ಮತಗಳ ಲೆಕ್ಕಾಚಾರವೂ ಇಲ್ಲಿ ಪ್ರಮುಖವಾಗಿದೆ. ಬಸವರಾಜ ಬೊಮ್ಮಾಯಿ ಇದೇ ಕ್ಷೇತ್ರದಿಂದ 2 ಬಾರಿ ಜನತಾದಳದಿಂದ ಪ್ರತಿನಿಧಿಸಿ ಗೆಲುವು ಸಾಧಿಸಿದ್ದರು. 2008ರ ಚುನಾವಣೆಯಲ್ಲಿ ಅವರು ಬಿಜೆಪಿ ಸೇರಿ ಶಿಗ್ಗಾಂವಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. ಪರಿಷತ್ ಕ್ಷೇತ್ರದಲ್ಲಿ ಮೊದಲಿನಿಂದಲೂ ಬೊಮ್ಮಾಯಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಅವರ ನಂತರ ಬಿಜೆಪಿಯಿಂದ 2009ರಲ್ಲಿ ಶಿವರಾಜ ಸಜ್ಜನರ ಆಯ್ಕೆಯಾಗಿದ್ದರು. 2013ರಲ್ಲಿ ಕೆಜಿಪಿ ಸೇರಿದ ಸಜ್ಜನರ ರಾಜೀನಾಮೆ ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ನಾಗರಾಜ ಛಬ್ಬಿ ಗೆದ್ದಿದ್ದರು. ಅವರ ವಿರುದ್ಧ ಸ್ಪರ್ಧಿಸಿದ್ದ ಪ್ರದೀಪ ಶೆಟ್ಟರ್ ಸೋಲು ಕಂಡಿದ್ದರು.
2015ರ ಚುನಾವಣೆಯಲ್ಲಿ ಎರಡೂ ಪಕ್ಷಗಳು ತಲಾ ಒಬ್ಬರೇ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್ನಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಪ್ರದೀಪ ಶೆಟ್ಟರ್ ಸುಲಭ ಗೆಲುವು ಸಾಧಿಸಿದರು. ಅದೇ ತಂತ್ರಗಾರಿಕೆಯನ್ನು ಈ ಬಾರಿಯೂ ಉಭಯ ಪಕ್ಷಗಳು ಅನುಸರಿಸಿವೆ. ಬಿಜೆಪಿಯಿಂದ ಹಾಲಿ ಸದಸ್ಯ ಪ್ರದೀಪ ಶೆಟ್ಟರ್, ಕಾಂಗ್ರೆಸ್ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಖಾಡಕ್ಕಿಳಿದಿದ್ದಾರೆ. ಇಬ್ಬರೂ ಸಲೀಸಾಗಿ ಗೆಲುವಿನ ದಡ ಸೇರುವ ನಿರೀಕ್ಷೆಯಿದೆ. ಕ್ಷೇತ್ರ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಂತಹ ಘಟಾನುಘಟಿಗಳು, ಮೂವರು ಸಚಿವರಿದ್ದಾರೆ. ಒಟ್ಟು 17 ಶಾಸಕರಲ್ಲಿ ಬಿಜೆಪಿ 13 ಶಾಸಕರ ಬಲ ಹೊಂದಿದೆ. ಪ್ರದೀಪ ಶೆಟ್ಟರ್, ಜಗದೀಶ ಶೆಟ್ಟರ್ ಸಹೋದರ ಎನ್ನುವುದು ಗಮನಾರ್ಹ. ಹೀಗಾಗಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಪ್ರಾಶಸ್ಱದ ಮತ ಪಡೆದು ಗೆಲ್ಲಲು ಬಿಜೆಪಿ ಯತ್ನಿಸುತ್ತಿದೆ.
ಸಲೀಂ ಅಹ್ಮದ್ ಬೆಂಗಳೂರು ಮೂಲದವರಾದರೂ ಹಾವೇರಿ ಜಿಲ್ಲೆಯೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. 2009 ಹಾಗೂ 2014ರಲ್ಲಿ ಹಾವೇರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಆದರೂ ಹಾವೇರಿ ಜಿಲ್ಲೆಯ ನಂಟನ್ನು ಅವರು ಬಿಟ್ಟಿಲ್ಲ. ಸೋಲುಂಡ ನೆಲದಲ್ಲಿಯೇ ಗೆಲುವು ಹುಡುಕುವ ಹೊಸ ಹಾದಿಯಲ್ಲಿ ಸಾಗಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದು ಪಕ್ಷದಲ್ಲಿ ಹಿಡಿತ ಸಾಧಿಸುವ ಇರಾದೆ ಹೊಂದಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೂ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಪಕ್ಷ ಹೊಂದಿದೆ. ಕೆಪಿಸಿಸಿಯಲ್ಲಿ ಮಹತ್ವದ ಹುದ್ದೆಯಲ್ಲಿರುವ ಸಲೀಂ ಗೆಲ್ಲಿಸಲು ಹಾಲಿ, ಮಾಜಿ ಶಾಸಕರು ಪಣತೊಟ್ಟು ನಿಂತಿದ್ದಾರೆ. ಪಕ್ಷಗಳ ಚಿನ್ಹೆಯಡಿ ಗೆದ್ದು ಬರುತ್ತಿದ್ದ ಜಿಪಂ, ತಾಪಂಗಳಲ್ಲಿ ಈಗ ಸದಸ್ಯರಿಲ್ಲ. ಗದಗ ನಗರಸಭೆ, ರಟ್ಟಿಹಳ್ಳಿ, ಗುತ್ತಲ ಪಟ್ಟಣ ಪಂಚಾಯಿತಿ, ಬಂಕಾಪುರ ಪುರಸಭೆಗಳಿಗೂ ಸದಸ್ಯರ ಆಯ್ಕೆಯಾಗಿಲ್ಲ. ಪಕ್ಷ ಬೆಂಬಲಿತ 300ಕ್ಕೂ ಅಧಿಕ ಸದಸ್ಯರು ಮತದಾನದಿಂದ ಹೊರಗುಳಿಯುವಂತಾಗಿದೆ. ಪಕ್ಷಾತೀತವಾಗಿ ಆಯ್ಕೆಯಾಗಿರುವ ಗ್ರಾಪಂ ಸದಸ್ಯರೇ ಚುನಾವಣೆಯಲ್ಲಿ ಪ್ರಮುಖರಾಗಿದ್ದಾರೆ. ಉಭಯ ಪಕ್ಷಗಳ ಬೆಂಬಲಿತರು ಇಲ್ಲಿ ಹೆಚ್ಚು ಕಡಿಮೆ ಸಮವಾಗಿದ್ದಾರೆ.
ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹಾವೇರಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಸೇರಿ ಒಟ್ಟು 8 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಮಲ್ಲಿಕಾರ್ಜುನ ಮೂರು ಜಿಲ್ಲೆಗಳಲ್ಲಿ ಮತಬೇಟೆಗೆ ಇಳಿದಿದ್ದಾರೆ. ಹಾವೇರಿ ಜಿಲ್ಲೆಯಲ್ಲಿಯೇ ಅತಿಹೆಚ್ಚು (3,369) ಮತಗಳಿದ್ದು, ಸ್ಥಳೀಯ ಅಭ್ಯರ್ಥಿ ಬೆಂಬಲಿಸಿ ಎಂಬ ಅಜೆಂಡಾದೊಂದಿಗೆ ಪ್ರಚಾರ ನಡೆಸಿದ್ದಾರೆ. ಗದಗ, ಧಾರವಾಡ ಜಿಲ್ಲೆಯಲ್ಲಿಯೂ ಬೆಂಬಲಿಗರ ಪಡೆ ಕಟ್ಟಿಕೊಂಡು ಗ್ರಾಪಂ ಸದಸ್ಯರ ಮನವೊಲಿಕೆ ಕಸರತ್ತನ್ನು ಆರಂಭಿಸಿದ್ದಾರೆ. ಗ್ರಾಪಂನಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅವು ವಿಭಜನೆಯಾದರೆ ಬಿಜೆಪಿಗೆ ಮುಳುವಾಗುವುದು ಖಚಿತ. ಕಾಂಗ್ರೆಸ್ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಧರ್ಮ ಲೆಕ್ಕಾಚಾರದಲ್ಲಿಯೂ ಮತ ಸೆಳೆಯುವ ತಂತ್ರಗಾರಿಕೆಯನ್ನು ಮಲ್ಲಿಕಾರ್ಜುನ ನಡೆಸಿದ್ದಾರೆ. ಹೀಗಾಗಿ ಸುಲಭವಾಗಿ ದಕ್ಕಬೇಕಿದ್ದ ವಿಜಯಮಾಲೆಗೆ ಕೈ- ಕಮಲ ಪಕ್ಷ ಅಭ್ಯರ್ಥಿಗಳು ಕಸರತ್ತು ಮಾಡಬೇಕಿದೆ. ಇದೇ ಕಾರಣಕ್ಕೆ ಕಾಂಚಾಣ ಕುಣಿತವೂ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.
ಬೆಳಗಾವಿ ದ್ವಿಸದಸ್ಯ ವಿಧಾನಪರಿಷತ್ಕ್ಷೇತ್ರ
ವಿಧಾನಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಸ್ಥಾನಳಿಗೆ ನಡೆಯುತ್ತಿರುವ ಚುನಾವಣಾ ಅಖಾಡ ರಂಗೇರಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಗೆ ಪಕ್ಷೇತರ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಲಿದ್ದು, ಸಮರ ರೋಚಕತೆ ಪಡೆದಿದೆ.
4-5 ದಶಕಗಳಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರದಲ್ಲಿ 2015ರ ಪರಿಷತ್ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ತೀವ್ರ ಪೈಪೋಟಿ ನಡುವೆ ಮತಗಳು ವಿಭಜನೆಗೊಂಡು ಪಕ್ಷೇತರ ಅಭ್ಯರ್ಥಿಯಾಗಿದ್ದ ವಿವೇಕರಾವ್ ಪಾಟೀಲ ಪ್ರಥಮ ಪ್ರಾಶಸ್ಱದ (3981 ಮತ) ಗೆಲುವು ಸಾಧಿಸಿದರು. ಪ್ರಥಮ ಪ್ರಾಶಸ್ಱದ ಮತಗಳ ಎಣಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ (2292 ಮತ) ಕೋಟಾ ಮೌಲ್ಯಕ್ಕಿಂತ ಕಡಿಮೆ ಮತ ಗಳಿಸಿದ್ದರೂ ಪ್ರಯಾಸದ ಗೆಲುವು ಸಾಧಿಸಿದರು. ಮೂರನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್ನ ವೀರಕುಮಾರ ಪಾಟೀಲ 1582 ಮತ, ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿ ಡಾ. ವಿ.ಎಸ್. ಸಾಧುನವರ 1215 ಮತ ಗಳಿಸಿದ್ದರು. ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ ಕಾಂಗ್ರೆಸ್, ಬಿಜೆಪಿಗೆ ತಕ್ಕ ಪಾಠ ಕಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಎರಡೂ ಪಕ್ಷಗಳು ಒಂದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಈ ಬಾರಿಯೂ ಚುನಾವಣೆಯಲ್ಲಿ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ, ಕಾಂಗ್ರೆಸ್ನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿ ಕಣದಲ್ಲಿದ್ದಾರೆ. ಇದು ರಾಜಕೀಯ ಪಕ್ಷಗಳ ಗೆಲುವಿನ ಲೆಕ್ಕಾಚಾರಕ್ಕೆ ತಿರುಗುಬಾಣವಾಗಿದೆ. ಅಲ್ಲದೆ, ಸದಸ್ಯ ಮತದಾರರನ್ನು ಹಿಡಿದಿಟ್ಟುಕೊಳ್ಳಲು ನಾನಾ ರೀತಿಯ ಕಸರತ್ತು ಶುರುವಾಗಿದೆ.
2015ರ ಚುನಾವಣೆ
ಚುನಾವಣೆ ಮೇಲ್ನೋಟಕ್ಕೆ ‘ಬಿಜೆಪಿ ವರ್ಸ್ಸ್ ಕಾಂಗ್ರೆಸ್’ ಮತ್ತು ‘ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್’ ಎಂದು ಬಿಂಬಿಸಲಾಗುತ್ತಿದೆ. ಆದರೆ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಮತ್ತು ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಒಳಗೊಳಗೇ ಒಬ್ಬರನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ಪರೋಕ್ಷ ವಾಗಿ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಏಟಿಗೆ ಏದಿರೇಟು ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಫಲಿತಾಂಶದ ಬಳಿಕವೇ ಯಾರಿಗೆ ಯಾರು ಏಟು ಕೊಟ್ಟಿದ್ದಾರೆ ಎನ್ನುವುದು ತಿಳಿಯಲಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲಖನ್ ಜಾರಕಿಹೊಳಿಯೇ ಈ ಚುನಾವಣೆಯ ಪ್ರಮುಖ ಕೇಂದ್ರಬಿಂದು. ಏಕೆಂದರೆ, ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಕಿರಿಯ ಸಹೋದರ ಲಖನ್. ಜಾರಕಿಹೊಳಿ ಕುಟುಂಬದ ಕಿರಿಯ ಕುಡಿ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಜಾರಕಿಹೊಳಿ ಸಹೋದರರು ತಂತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಇದು ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೂ ಜಾರಕಿಹೊಳಿ ಕುಟುಂಬದ ನಾಮಬಲವೇ ಪಕ್ಷೇತರ ಅಭ್ಯರ್ಥಿ ಲಖನ್ಗೆ ವರದಾನವಾಗಿ ಪರಿಣಮಿಸುತ್ತಿದೆ. ಇನ್ನು ಸಹೋದರನನ್ನು ಮೇಲ್ಮನೆಗೆ ಕಳುಹಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಅವಿರತ ಹೋರಾಟ ನಡೆಸುತ್ತಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂಗಳ ಸದಸ್ಯರು, 18 ಶಾಸಕರು, ಮೂವರು ಸಂಸದರು, ಓರ್ವ ರಾಜ್ಯಸಭಾ ಸದಸ್ಯ ಸೇರಿ 8871 ಸದಸ್ಯರು ಮತ ಚಲಾಯಿಸಲಿದ್ದಾರೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ 8405 ಗ್ರಾಪಂ ಸದಸ್ಯರೇ ಇದ್ದಾರೆ. ಜಿಪಂ, ತಾಪಂ, 14 ಪುರಸಭೆ, 12ಕ್ಕೂ ಅಧಿಕ ಪಟ್ಟಣ ಪಂಚಾಯಿತಿಗಳ ಅಧಿಕಾರ ಅವಧಿ ಮುಗಿದಿದ್ದು, ಇನ್ನೂ ಚುನಾವಣೆ ನಡೆದಿಲ್ಲ. ಹಾಗಾಗಿ ಈ ಸ್ಥಳೀಯ ಸಂಸ್ಥೆಗಳ ಸದಸ್ಯರು ಚುನಾವಣೆ ಮತದಾನದಿಂದ ವಂಚಿತರಾಗಲಿದ್ದಾರೆ.