

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯ ಕಾಂಗ್ರೆಸ್ ಸರ್ಕಾರ ವೀರಶೈವ-ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿರುವುದು ಅಸಹನೀಯ ಮತ್ತು ಖಂಡನೀಯ ಎಂದು ಸಮಾಜದ ಹಿರಿಯ ಮುಖಂಡರೂ ಆದ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ. ಪಾಟೀಲ್ ಹೇಳಿದ್ದಾರೆ.
ಒಂದು ವರ್ಗದ ತುಷ್ಠೀಕರಣ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್, ಈಗ ವಿವಿಧ ಇಲಾಖೆಗಳಲ್ಲಿರುವ ವೀರಶೈವ-ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸುತ್ತಿದೆ. ಸಮಾಜದ ಅಧಿಕಾರಿಗಳಿಗೆ ಪ್ರಮುಖ ಹುದ್ದೆ ಸಿಗದಂತೆ ಮಾಡುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇದು ಸರ್ಕಾರವೇ ಜಾತಿವಾದಕ್ಕೆ ಇಂಬು ನೀಡುತ್ತಿರುವುದಕ್ಕೆ ನಿದರ್ಶನ ಎಂದು ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅಧಿಕಾರಿಗಳ ಜಾತಿ ತಾರತಮ್ಯದ ವಿಷಯವನ್ನು ಆ ಪಕ್ಷದ ಹಿರಿಯ ನಾಯಕರೂ ಆದ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟಿçÃಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೇ ಬಹಿರಂಗಪಡಿಸಿ ಅತೃಪ್ತಿ ಹೊರಹಾಕಿದ್ದಾರೆ. ಇದು ಕಾಂಗ್ರೆಸ್ ನಾಯಕರ ಒಳಮುಖ ಎಂಥದ್ದು ಎಂಬುದನ್ನು ತೋರಿಸಿಕೊಟ್ಟಿದೆ. ಕೂಡಲೇ ಸರ್ಕಾರ ಆಗಿರುವ ಪ್ರಮಾದ ತಿದ್ದಿಕೊಂಡು ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಸುಗಮ, ಸುವ್ಯವಸ್ಥಿತ ನಡೆಸಲು ಹಾಗೂ ಪಾರದರ್ಶಕ ಆಡಳಿತ ನೀಡಲು ದಕ್ಷ, ಪ್ರಾಮಾಣಿಕತೆ ಮಾನದಂಡ ಮೇಲೆ ಅಧಿಕಾರಿಗಳನ್ನು ನಿಯೋಜಿಸಬೇಕು ಬೇಕು ಹೊರತು, ಜಾತಿ ಆಧಾರದಲ್ಲಿ ಅಲ್ಲ. ಒಂದು ಜಾತಿ ಕಡೆಗಣಿಸಿ ಸೀಮಿತ ಜಾತಿಯವರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿದರೆ ಇಡೀ ವ್ಯವಸ್ಥೆ ಬುಡಮೇಲಾಗುವ ಸಾಧ್ಯತೆಗಳಿರುತ್ತವೆ. ಸರ್ಕಾರ ಇದಕ್ಕೆ ಆಸ್ಪದ ನೀಡಬಾರದು. ಈ ವಿಷಯದಲ್ಲಿ ನಮ್ಮ ಪಕ್ಷದ ಹಿರಿಯರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಇತರರು ಧ್ವನಿ ಎತ್ತಿದ್ದಾರೆ. ಸರ್ಕಾರ ತನ್ನ ಧೋರಣೆ ಬದಲಿಸಿಕೊಳ್ಳದಿದ್ದರೆ ವೀರಶೈವ-ಲಿಂಗಾಯತ ಸಮಾಜ ತಕ್ಕಪಾಠ ಕಲಿಸಲು ಸಮರ್ಥವಾಗಿದೆ ಎಂದು ಎಚ್ಚರಿಸಿದ್ದಾರೆ.