

ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಬಾಗಲಕೋಟೆಯಲ್ಲಿ ಸ್ವತಃ ಸಮಸ್ಯೆ ಹೊತ್ತುಕೊಂಡು ಸಚಿವರ ಎದುರು ಅಳಲು ತೋಡಿಕೊಳ್ಳಲು ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಆಗಮಿಸಿದ್ದು ವಿಶೇಷವಾಗಿತ್ತು.
ಬಾಗಲಕೋಟೆ ಜಿಲ್ಲೆಯ ಆಡಳಿತ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ನೂರಾರು ಜನರು ಅಹವಾಲು ಸಲ್ಲಿಸಿದರು. ಸಾರ್ವಜನಿಕರ ಸರದಿಯಿಂದ ಬಂದ ಬಾಗಲಕೋಟೆ ಶಾಸಕ ಹೆಚï ವೈ ಮೇಟಿ ಅವರ ಪುತ್ರಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಸಚಿವರ ಕೈಗೆ ಅರ್ಜಿ ಇಟ್ಟಾಗ ಎಲ್ಲಿರಿಗೂ ಅಚ್ಚರಿ.
ತಮ್ಮ ತಂದೆಯವರೇ ಶಾಸಕರಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಐಹೊಳೆ, ಚಿಲ್ಲಾಪುರ, ನಿಂಬಲಗುಂದಿ, ಕಳ್ಳಿಗುಡ್ಡ, ಕ್ಯಾದಿಗೇರಿ ಗ್ರಾಮಗಳಲ್ಲಿ ಶೌಚಾಲಯ ಸಮಸ್ಯೆ ಇದೆ. ಹಲವು ವರ್ಷಗಳಿಂದ ಇದು ಬಗೆಹರಿದಿಲ್ಲ. ಇದಕ್ಕಾಗಿ ಸಾಕಷ್ಟು ಸಲ ಅಲೆದಾಡಿದ್ದೇವೆ. ಯಾವುದಕ್ಕೂ ಸ್ಪಂದನೆ ಸಿಕ್ಕಿಲ್ಲ ಎಂದು ಬಾಯಕ್ಕ ಮೇಟಿ ಸಚಿವರ ಗಮನಕ್ಕೆ ತಂದರು.
೨೦೧೬ರಲ್ಲಿ ಐಹೊಳೆ ಜಿಪಂ ಕ್ಷೇತ್ರದ ಸದಸ್ಯೆ ಆಗಿದಿಗಿನಿಂದಲೂ ಅಧಿಕಾರಿಗಳಿಗೆ ಇದನ್ನು ಹೇಳಿದ್ದರೂ ಕೆಲಸ ಆಗಿಲ್ಲ. ಈ ಗ್ರಾಮಗಳಲ್ಲಿ ನೆಲಹಾಸಿಗೆ ಸಂಪೂರ್ಣ ಕಲ್ಲಿನಿಂದ ಕೂಡಿದೆ. ಪಾಯ ತೆಗೆಯಲು ಆಗಲ್ಲ. ಇದರಿಂದ ಅಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಲು ಆಗಲ್ಲ. ಹೀಗಾಗಿ ಅಲ್ಲಿ ಸಾಮೂಹಿಕ ಬಹಿರ್ದೆಸೆಗೆ ತೆರಳುವ ಜಾಗದಲ್ಲಿ ತಡೆಗೋಡೆ ನಿರ್ಮಿಸಬೇಕು ಎನ್ನುವುದು ಅಲ್ಲಿನ ಜನರ ಬೇಡಿಕೆ. ಇದು ಆಗಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹತ್ತು ವರ್ಷಗಳಿಂದ ನಾನು ಈ ಬಗ್ಗೆ ಪ್ರಯತ್ನಿಸಿದರೂ ಆಗುತ್ತಿಲ್ಲ. ಈಗ ನೀವೆ ಪರಿಹಾರ ಒದಗಿಸಬೇಕು ಎಂದರು.