

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರು ನಡೆಸುವ ಕಗ್ಗೋಡದ ಗೋಶಾಲೆಗೆ ಸಂಬಂಧಿಸಿದಂತೆ ಬಿಸಿ ಬಿಸಿ ಚರ್ಚೆಗಳು ಆರಂಭಗೊಂಡಿವೆ.
ಗೋಶಾಲೆ ಹೆಸರಿನಲ್ಲಿ ಶಾಸಕ ಯತ್ನಾಳ ಭ್ರಷ್ಟಾಚಾರ ನಡೆಸುತ್ತಿದ್ದಾರೆಂಬ ಆಪಾದನೆ ಬಿಜೆಪಿ ಪಕ್ಷದ ಮುಖಂಡ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಗಂಭೀರ ಆರೋಪ ಮಾಡಿದ್ದರು. ನಾನು ಭ್ರಷ್ಟಾಚಾರವನ್ನೇ ಮಾಡಲ್ಲ, ಏನೇ ಕೊಡೋದಿದ್ದರೂ ಗೋಶಾಲೆಗೆ ಕೊಡಿ ಎನ್ನುತ್ತಾರೆಂದು ವಿಜುಗೌಡರು ಆರೋಪಿಸಿದ್ದರು.ಅಲ್ಲದೇ, ಗೋಶಾಲೆಯ ದನಗಳೇನಾದರೂ ಹಣ ತಿನ್ನುತ್ತಾವೆಯೇ ಎಂದು ಲೇವಡಿ ಮಾಡಿದ್ದರು.
ಅದಾದ ಬಳಿಕ ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಸಹ ಕಗ್ಗೋಡ ಗೋಶಾಲೆ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಇದನ್ನು ಖಂಡಿಸಿ ಯತ್ನಾಳರ ಬೆಂಬಲಿರು ಮತ್ತು ಸಿದ್ಧೇಶ್ವರ ಸಂಸ್ಥೆಯಿಂದ ಕೂಡ ಪ್ರತಿಕ್ರಿಯೆ ನೀಡಿದ್ದು, ಆರೋಪಕ್ಕೆ ಸೂಕ್ತ ದಾಖಲೆ ನೀಡದೇ ಹೋದಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಧ್ಯಕ್ಷತೆಯ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗೋ ರಕ್ಷಾ ಕೇಂದ್ರದಲ್ಲಿ ಹಿಂದುಗಳು ಪೂಜ್ಯ ಭಾವನೆಯಿಂದ ಕಾಣುವ ಸಾವಿರಾರು ಗೋವುಗಳನ್ನು ಭಕ್ತಿಯಿಂದ ಸಾಕಲಾಗುತ್ತಿದೆ. ಹೀಗಾಗಿ ಇಲ್ಲಿನ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಶುದ್ಧ ಸುಳ್ಳು ಎಂದು ಎಂ.ಎಸ್. ಕರಡಿ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ರಾಜಶೇಖರ ಮಗಿಮಠ, ಮಾಜಿ ಉಪಮೇಯರ್ ರಾಜೇಶ ದೇವಗಿರಿ, ದಾದಾಸಾಹೇಬ ಬಾಗಾಯತ, ಮಡಿವಾಳ ಯಾಳವಾರ, ಬಸವರಾಜ ಬಿರಾದಾರ, ಎಂ.ಕೆ. ಕಲಾದಗಿ, ರಾಜಶೇಖರ ಭಜಂತ್ರಿ, ರಮೇಶ ಪಡಸಲಗಿ, ಬಿ.ಡಿ.ಪಾಟೀಲ, ಬಿ.ಬಿ.ಬಿರಾದಾರ, ನಾಗರಾಜ ಮುಳವಾಡ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕೂಡಲೇ ಪ್ರತಿಕ್ರಿಯೆ ನೀಡಿರುವ ಅಬ್ದುಲ್‌ಹಮೀದ್ ಮುಶ್ರೀಫ್, ಕಗ್ಗೋಡ ಗೋರಕ್ಷಾ ಕೇಂದ್ರದಲ್ಲಿ ಎಷ್ಟು ಗೋವುಗಳಿವೆ? ಅವುಗಳು ಎಲ್ಲಿಂದ ಬಂದಿವೆ? ಎಂಬುದರ ಕುರಿತು ದಾಖಲೆ ಬಹಿರಂಗಗೊಳಿಸುವಂತೆ ಆಗ್ರಹಿಸಿದ್ದಾರೆ.
ಮಹಾನರಗಪಾಲಿಕೆ ಅಧಿಕಾರಿಗಳು ಕಳೆದ 10 ವರ್ಷಗಳಿಂದ ಜಪ್ತಿ ಮಾಡಿದ ಗೋವುಗಳು ಎಲ್ಲಿ ಹೋದವು? ಎಷ್ಟು ಜಪ್ತಿ ಮಾಡಲಾಗಿತ್ತು? ಜಪ್ತಿ ಮಾಡದ ದಾಖಲೆಗಳು ಎಲ್ಲಿವೆ? ನಿಮ್ಮದೆ ಬಿಜೆಪಿ ಸರ್ಕಾರವಿದ್ದಾಗ ಅಧಿಕಾರಿಗಳನ್ನು ಬಳಸಿಕೊಂಡು ಜಫ್ತಿ ಮಾಡಿದ ಗೋವುಗಳು ಎಲ್ಲಿವೆ? ಎಂಬುದನ್ನು ತಿಳಿಸಬೇಕು ಎಂದು ಮುಶ್ರೀಫ್ ಆಗ್ರಹಿಸಿದ್ದಾರೆ.
ಗೋಶಾಲೆಯ ಹೆಸರಲ್ಲಿ ಸರ್ಕಾದಿಂದ ಪಡೆದ ಅನುದಾನ ಬಹಿರಂಗ ಪಡಿಸಬೇಕು. ಗೋರಕ್ಷಾ ಕೇಂದ್ರ ನಗರ ಶಾಸಕರ ತಂದೆಯ ಹೆಸರಿನಲ್ಲಿದ್ದು, ಸಿದ್ಧೇಶ್ವರ ಸಂಸ್ಥೆಯವರು ಏಕೆ ಉತ್ತರಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ತಾಕತ್ತಿದ್ದರೆ ಶಾಸಕರು ಎಲ್ಲ ವಿಷಯಗಳನ್ನು ಬಹಿರಂಗಪಡಿಸಲಿ ಎಂದು ಅವರು ಪ್ರಕಟಣೆ ಮೂಲಕ ಸವಾಲು ಹಾಕಿದ್ದಾರೆ.
ಹೀಗೆ ಕಗ್ಗೋಡದ ಗೋ ರಕ್ಷಾ ಕೇಂದ್ರ ವಿವಾದದ ಗೂಡಾಗುತ್ತಿದ್ದು, ಭ್ರಷ್ಟಾಚಾರ ಹಾಗೂ ಅಕ್ರಮಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ತಾರಕಕ್ಕೇರಿವೆ. ಈ ವಿಚಾರ ಇನ್ನೂ ಎಲ್ಲಿಗೆ ಹೋಗಿ ತಲುಪುವುದೋ ಎಂಬ ಕುತೂಹಲ ಗರಿಗೆದರಿದೆ.