ತೊಗರಿ ಬೆಳೆ ಹಾನಿ, ಮಧ್ಯರಾತ್ರಿ ಸರ್ಕಾರದ ಗಮನ ಸೆಳೆದ ಶಾಸಕ ಯಶವಂತರಾಯಗೌಡ ಪಾಟೀಲ

Indi MLA
Published on

ವಿಜಯಪುರ: ಬಿತ್ತನೆ ಬೀಜದ ಸಮಸ್ಯೆಯೋ...ಹವಾಮಾನ ವೈಪರೀತ್ಯವೋ ಒಟ್ಟಾರೆಯಾಗಿ ತೊಗರಿ ಬೆಳೆ ಹಾನಿಯಿಂದಾಗಿ ಅಪಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕೆಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಗ್ರಹಿಸಿದರು.

ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಸೋಮವಾರ ಮಧ್ಯರಾತ್ರಿ ಸರ್ಕಾರದ ಗಮನ ಸೆಳೆದ ಶಾಸಕ ಯಶವಂತರಾಯಗೌಡ, ಈ ಮಧ್ಯರಾತ್ರಿಯಲ್ಲೂ ತೊಗರಿ ಬೆಳೆಗಾರರ ಸಂಕಷ್ಟ ಹೇಳಲು ಅವಕಾಶ ಕಲ್ಪಿಸಿದ ಮತ್ತು ಆಲಿಸಲು ಆಸಕ್ತಿ ವಹಿಸಿದ ಸರ್ಕಾರದ ನಡೆಗೆ ಮೊದಲು ಧನ್ಯವಾದ ಹೇಳುವುದಾಗಿ ತಿಳಿಸಿದರು.

ಮುಂದುವರಿದು ಪ್ರಸಕ್ತ ಹಂಗಾಮಿನಲ್ಲಿ ತೊಗರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ತೊಗರಿ ಕಣಜ ಎಂಬ ಖ್ಯಾತಿಗೆ ಕಲಬುರಗಿ ಭಾಜನವಾಗಿತ್ತು. ಆದರೆ, ಅದಕ್ಕಿಂತೂ ಹೆಚ್ಚಿನ ಪ್ರಮಾಣದಲ್ಲಿ ವಿಜಯಪುರ ಜಿಲ್ಲೆಯಲ್ಲಿ ತೊಗರಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಶೇ.70 ರಷ್ಟು ಜಮೀನಿನಲ್ಲಿ ತೊಗರಿ ಬೆಳೆಯಲಾಗಿದೆ. ಒಟ್ಟು 5,34,000 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇಂಡಿ ತಾಲೂಕೊಂದರಲ್ಲೇ 1,21,000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆಯ ಕೊರತೆ, ಕಳಪೆ ಬಿತ್ತನೆ ಬೀಜ, ಮಂಜು ಮತ್ತಿತರ ಹವಾಮಾನ ವೈಪರಿತ್ಯದಿಂದ ಬೆಳೆ ಹಾಳಾಗಿದೆ. ಅಂದಾಜು 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ. ಹೀಗಾಗಿ ನೆರವಿಗೆ ಧಾವಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದರು.

ವಿಜಯಪುರ ಜಿಲ್ಲೆಯ ಜನ ಒಂದಿಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಪ್ರಾಕೃತಿಕ ಅಸಮತೋಲನದಿಂದಾಗಿ ಪ್ರತೀ ವರ್ಷ ಹಾನಿ ಎದುರಿಸುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಅಪಾರ ಪ್ರಮಾಣದಲ್ಲಿ ಭೂಮಿ ಕಳೆದುಕೊಂಡು ಐದಾರು ಜಿಲ್ಲೆಗಳಿಗೆ ಬೆಳಕಾದವರು ವಿಜಯಪುರದವರು. ಆದರೆ, ಇಂದು ನಾವೇ ಕತ್ತಲೆಯಲ್ಲಿದ್ದೇವೆ. ಜಿಲ್ಲೆಗೆ ಹಂಚಿಕೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ವಿಜಯಪುರ, ಕಲಬುರಗಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಪ್ರತೀ ವರ್ಷ ಜನರು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಇಸ್ರೋದ ವಿಜ್ಞಾನಿಗಳ ತಂಡೆ ಬಂದು 1100-1200 ಮೀಟರ್ ಆಳಕ್ಕೆ ಬೋರ್‌ವೆಲ್ ಕೊರೆಯಿಸಿ ನೋಡಿದರೂ ನೀರು ಸಿಗದ ಸ್ಥಿತಿ ಕಂಡು ಬಂದಿತ್ತು. ಟ್ಯಾಂಕರ್ ಬಳಸಿ ನೀರು ಪೂರೈಸುವ ಸ್ಥಿತಿ ಇತ್ತು. ಹೀಗಾಗಿ ಶಾಶ್ವತ ಪರಿಹಾರದ ಅಗತ್ಯವೂ ಇದೆ ಎಂದರು.

ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸುತ್ತಾ, ತೊಗರಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬೆಳೆ ಹಾನಿಗೆ ನಿರ್ದಿಷ್ಟ ಕಾರಣ ತಿಳಿಯದಾಗಿದೆ. ಒಂದು ಜಮೀನಿನಲ್ಲಿ ಬೆಳೆ ಚೆನ್ನಾಗಿದ್ದರೆ ಇನ್ನೊಂದು ಕಡೆ ಚೆನ್ನಾಗಿಲ್ಲ. ಒಂದೇ ಕಂಪನಿತ ಬಿತ್ತನೆ ಬೀಜ ಒಂದು ಕಡೆ ಚೆನ್ನಾಗಿದ್ದರೆ ಇನ್ನೊಂದು ಕಡೆ ಚೆನ್ನಾಗಿಲ್ಲ. ಹೀಗಾಗಿ ಕಂಪನಿಯನ್ನೂ ದೂರುವಂತಿಲ್ಲ. ಹವಾಮಾನ ವೈಪರೀತ್ಯವೆನ್ನಲೂ ಆಗಲ್ಲ. ಹೀಗಾಗಿ ಎಲ್ಲ ಅಂಶಗಳೂ ಬೆಳೆ ಹಾನಿಗೆ ಕಾರಣ ಎನ್ನಬಹುದಾಗಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಲ್ಲದೇ, ಈಗಾಗಲೇ ಪ್ರಸ್ತಾವನೆ ಕೂಡ ಬಂದಿದೆ. ವಿಜ್ಞಾನಿಗಳ ಸರ್ವೇ ಪ್ರಕಾರ ಶೇಕಡಾ 30 ರಷ್ಟು ಇಳುವರಿ ಕುಂಠಿತಗೊಂಡಿದೆ. ೀಂದ್ರ ಸರ್ಕಾರದ ವಿಜ್ಞಾನಿಗಳ ತಂಡವೂ ಕೂಡಾ ಜಿಲ್ಲೆಗೆ ಬಂದು ಸರ್ವೇ ಕಾರ್ಯ ನಡೆಸಿದೆ. ಈ ಬಗ್ಗೆ ಸಮಗ್ರ ವರದಿ ಪಡೆದು ಮಖ್ಯ ಮಂತ್ರಿಗಳ ಜೊತೆಗೆ ಚರ್ಚೆ ಮಾಡಿ ಕ್ರಮ ಜರುಗಿಸಲಾಗುವದು ಎಂದರು.

ತೊಗರಿ ಬೆಳೆಯುವ 1,08,000 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇನ್ನುಳಿದ ರೈತರಿಗೂ ಪರಿಹಾರ ನೀಡುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಲಾಗಿದೆ ಎಂದರು.

ಅಷ್ಟಕ್ಕೆ ತೃಪ್ತರಾಗದ ಶಾಸಕ ಯಶವಂತರಾಯಗೌಡರು, ವೈಜ್ಞಾನಿಕ ಕೃಷಿ ಪದ್ಧತಿ ಕುರಿತು ಮತ್ತು ಸಮಗ್ರ ಬೇಸಾಯ ಪದ್ಧತಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕು. ದೀರ್ಘಕಾಲದ ಯೋಜನೆ ರೂಪಿಸಬೇಕೆಂದರು. ಸಚಿವ ಭೈರೇಗೌಡರು ಸಹಮತ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net