

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ಮಾರಾಟ ಮತ್ತು ಪ್ರದರ್ಶನಕ್ಕಿಟ್ಟಿದ್ದ ದನಗಳನ್ನು ಗುರುವಾರ ಶಾಸಕ ದರ್ಶನ್ ಪುಟ್ಟಣ್ಣಯ್ಯ ವೀಕ್ಷಿಸಿ ತಳಿಗಳ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡರು.
ಬೇಬಿಬೆಟ್ಟದ ಜಾತ್ರೆಗೆ ಮಂಡ್ಯ, ಮೈಸೂರು, ಹಾಸನ ಮತ್ತು ರಾಮನಗರಗಳಿಂದ ಹಳೀಕಾರ್, ಗಿರ್ ಸೇರಿದಂತೆ ವಿವಿಧ ದೇಸಿ ತಳಿಗಳ ದನಗಳನ್ನು ಆಗಮಿಸಿದ್ದು, ಜಾತ್ರಾ ಮಾಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಈ ಪೈಕಿ ಕೆಲ ರೈತರು ಬಹುಮಾನಕ್ಕಾಗಿಯೇ ದನಗಳನ್ನು ಸಾಕಿ ಪ್ರದರ್ಶನಕ್ಕಿಟ್ಟಿದ್ದು, ಶಾಸಕ ದರ್ಶನ್ ದನಗಳನ್ನು ವೀಕ್ಷಣೆ ಮಾಡಿ ದನಗಳ ತಳಿ, ವಯಸ್ಸು ಮತ್ತು ಹಲ್ಲುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವದಲ್ಲಿ ಮಾತ್ರ ಆಯ್ಕೆಯಾದ ಉತ್ತಮ ರಾಸುಗಳಿಗೆ ೆ ಚಿನ್ನದ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಇದರಿಂದ ದೇಸಿ ತಳಿಗೆ ಸೇರಿದ ದನಗಳನ್ನು ಸಾಕುವ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಬಾರಿಯೂ ಹಾಲುಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು, ಬೀಜದ ಹೋರಿಗಳಿಗೆ ಪ್ರತ್ಯೇಕವಾಗಿ ಬಹುಮಾನ ವಿತರಿಸಲಾಗುವುದು. ಪಶು ಸಂಗೋಪನೆ ಮತ್ತ ವೈದ್ಯಕೀಯ ಇಲಾಖೆಯ ಪಶು ವೈದ್ಯರು ನಾಳೆ (ಶುಕ್ರವಾರ) ದನಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಿದ್ದು, ಆಯ್ಕೆಯಾದ ದನಗಳಿಗೆ ಜಾತ್ರಾ ಮಹೋತ್ಸದ ಕೊನೆಯ ದಿನ ಬಹುಮಾನ ವಿತರಿಸಲಾಗುವುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎನ್.ರವೀಂದ್ರ, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ, ದಲಿತ ಮುಖಂಡ ಅಂಕಯ್ಯ, ಬೇವಿನಕುಪ್ಪೆ ಅನಿಲ್, ಹಾರೋಹಳ್ಳಿ ಲಕ್ಷ್ಮೇಗೌಡ, ಸೋಮು ಇತರರಿದ್ದರು.