

ಮುದಗಲ್: ಪಟ್ಟಣದಲ್ಲಿ ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಿರಂತರ ಕುಡಿವ ನೀರಿನ ಯೋಜನೆ ಆರಂಭಕ್ಕೆ ಶಾಸಕ ಮಾನಪ್ಪ ವಜ್ಜಲ್ ಗಮನಹರಿಸಬೇಕೆಂದು ಲಿಂಗಸುಗೂರು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಇದನ್ನೂ ಓದಿ: ಕುಡಿವ ನೀರಿಗೆ ದಾವಣಗೆರೆ ರೈತರ ತಕರಾರು
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷರ ಪದಗ್ರಹಣ ಹಾಗೂ ಎಪಿಎಂಸಿ ನಾಮನಿರ್ದೇಶಿತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ 240 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಕೆರೆ ತುಂಬುವ ಯೋಜನೆ, ಕುಡಿವ ನೀರಿನ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು.
ಪ್ರಸ್ತುತ 93 ಕೋಟಿ ರೂ.ವೆಚ್ಚದಲ್ಲಿ ನೀರಿನ ಯೋಜನೆಗಳು ಸಾಕಾರಗೊಂಡಿವೆ. ಸಂಬಂಧಪಟ್ಟ ಸಚಿವರೊಡನೆ ಚರ್ಚಿಸಿ ನೀರಿನ ಸಮಸ್ಯೆ ಬಗೆಹರಿಸಲಿ ಎಂದರು. ಗ್ರಾಪಂ, ಪುರಸಭೆ ಹಾಗೂ ತಾಪಂ ಚುನಾವಣೆಗಳು ಸಮೀಪಿಸುತಿದ್ದು, ಪಕ್ಷ ಸಂಘಟನೆಗೆ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ, ಸಂಜೀವಪ್ಪ ಚಲುವಾದಿ, ಪುರಸಭೆ ಸದಸ್ಯ ಎಸ್.ಆರ್.ರಸೂಲ್ ಮಾತನಾಡಿದರು. ಎಸ್ಸಿ ಘಟಕಕ್ಕೆ ಕೃಷ್ಣ ಚಲುವಾದಿ, ಎಸ್ಟಿ ಘಟಕಕ್ಕೆ ಹನುನೇಶ ನಾಯಕ್ ಛತ್ತರ ಅಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಿರ್ದೇಶಕರಾಗಿ ಮಲ್ಲಣ್ಣ ಲೆಕ್ಕಿಹಾಳ ನೇಮಕ ಆದೇಶ ಪತ್ರ ನೀಡಲಾಯಿತು.
ಪ್ರಮುಖರಾದ ಸತೀಶ ಭೋವಿ, ವಿಜಯಲಕ್ಷ್ಮೀ ಗುಂಡಸಾಗರ, ದೇವಮ್ಮ ಲಿಂಗಸುಗೂರು, ನಾಗನಗೌಡ ಚಿಕ್ಕ ಯರದಿಹಾಳ, ಪುರಸಭೆ ಸದಸ್ಯ ಹನುಮಂತ ವಾಲ್ಮೀಕಿ, ಸಂಗಪ್ಪ ಹಿರೇಮನಿ, ಮಲ್ಲಣ್ಣ ಸಾಹುಕಾರ, ಮೈಬೂಬಸಾಬ್ ಬಾರಿಗಿಡ, ಅರುಣ ಯರದಿಹಾಳ, ಪರಮೇಶ ಕನ್ನಾಪುರ ಹಟ್ಟಿ, ರಮೇಶ ಮುದಗಲ್ ಇತರರಿದ್ದರು.