

ಚಿತ್ರದುರ್ಗ: ಭದ್ರೆ ನೀರಿಗೆ ಪ್ರತಿ ಬಾರಿಯೂ ಆಕ್ಷೇಪವೆತ್ತುವ ದಾವಣಗೆರೆ ರೈತರ ನಿಲುವಿಗೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ‌್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುಗ್ರಾಮ ಯೋಜನೆಯಡಿ ಭದ್ರೆಯಿಂದ ಕುಡಿವ ನೀರು ಪೂರೈಸುವುದಕ್ಕೆ ಅಡ್ಡ ಗಾಲಿಡಲು ಮುಂದಾಗಿರುವ ಅಲ್ಲಿಯ ರೈತರ ನಡೆ ಖಂಡನೀಯ. ಇದರ ವಿರುದ್ಧ ಹೋರಾಟ ರೂಪಿಸಲು ಜೂ.25 ರಂದು ಬೆಳಗ್ಗೆ 11ಕ್ಕೆ ಹೊಸದುರ್ಗ ಪ್ರವಾಸಿ ಮಂದಿರದಲ್ಲಿ ರೈತರ, ನಾಗರಿಕರ ಸಭೆ ಕರೆಯಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ನೀರಾವರಿ, ಕುಡಿವ ನೀರಿನ ಯೋಜನೆಗಳ ಜಾರಿ ವಿಚಾರದಲ್ಲಿ ದಾವಣಗರೆ ಜಿಲ್ಲೆಯ ತಕಾರರುಗಳ ಹಿಂದೆ ಸ್ವಾರ್ಥ ರಾಜಕಾರಣವಿದೆ. ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ ಪ್ರದೇಶದ ಅಂದಾಜು 518 ಗ್ರಾಮಗಳಿಗೆ ಕುಡಿವ ನೀರು ಪೂರೈಸುವ 830 ಕೋಟಿ ರೂ. ವೆಚ್ಚದ ಯೋಜನೆ ಪೂರ್ಣವಾಗಿ ಟ್ರಯಲ್ ಹಂತಕ್ಕೆ ತಲುಪಿದೆ.
ಇದರಡಿ ಹೊಸದುರ್ಗ ಪಟ್ಟಣ ಸಹಿತ ತಾಲೂಕಿನ 346 ಹಳ್ಳಿಗಳಿಗೆ ಕುಡಿವ ನೀರು ಪೂರೈಕೆಯಾಗಲಿದೆ. ಈ ಹಂತದಲ್ಲಿ ಭದ್ರ ಬಲ ನಾ ಲೆ ಸೀಳಿ ನೀರು ಎತ್ತುವುದು ಬೇಡವೆಂದು ದಾವಣಗೆರೆ ರೈತರು ಹೋರಾಟ ಆರಂಭಿಸಿದ್ದಾರೆ. ಕಾಲುವೆಯಿಂದ ನೀರು ಎತ್ತಿದರೆ ಟೇಲ್ ಎಂಡ್‌ಗೆ ನೀರು ತಲುಪುವುದಿಲ್ಲ. ಬದಲಿ ನೀರಿನ ಮೂಲ ಹುಡುಕಿಕೊಳ್ಳುವ ಇತ್ಯಾದಿ ಅವೈಜ್ಞಾನಿಕ ಸಂಗತಿಗಳನ್ನು ಮುಂದಿಟ್ಟುಕೊಂಡು ಜೂ. 28ರಂದು ದಾವಣಗೆರೆ ಬಂದ್ ಕರೆ ನೀಡಲಾಗಿದೆ ಎಂದು ಲಿಂಗಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.
ಭದ್ರಾ ಕಾಲುವೆಯಿಂದ ಇದೇ ಮೊದಲ ಬಾರಿಗೆ ಬಹುಗ್ರಾಮ ಕುಡಿವ ನೀರಿನ ಯೋಜನೆಗಳನ್ನು ರೂಪಿಸಿಲ್ಲ. ಭದ್ರಾವತಿ, ಚನ್ನಗಿರಿ, ದಾವಣಗೆರೆ ತಾಲೂಕು ಸೇರಿ ನಾನಾ ಎಂವಿಎಸ್‌ಗಳಿಗೆ ಭದ್ರಾ ಕಾಲುವೆಯಿಂದ ನೀರು ಪಡೆಯಲಾಗುತ್ತಿದೆ. ಆಗ ಇಲ್ಲದ ಆಕ್ಷೇಪಗಳು ಈಗ ಯಾಕೆ? ಜಲಾಶಯದಿಂದ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಹರಿದರೂ ಪರವಾಗಿಲ್ಲ, ಕುಡಿವುದಕ್ಕೆ ನೀರು ಕೊಡಬಾರದೆಂಬ ನಿಲುವು ಸರಿಯಲ್ಲ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ನಿಯಮ ಮೀರಿ ಭತ್ತ ಬೆಳೆಯಲಾಗುತ್ತಿದೆ. ಒಂದು ಅರೆ ನೀರಾವರಿ ಬೆಳೆಗೆ ಭದ್ರಾ ಜಲಾಶಯದಿಂದ ನೀರು ಪೂರೈಕೆ ನಿಬಂಧನೆ ಮೀರಿ 2 ಭತ್ತದ ಬೆಳೆಗಳಿಗೆ ನೀರು ಪಡೆಯಲಾಗುತ್ತಿದೆ. ಇದರಿಂದ ಟೇಲ್ಎಂಡ್‌ಗೆ ನೀರು ಪೂರೈಕೆಯಾಗದಿದ್ದರೆ ಅದಕ್ಕೆ ಚಿತ್ರದುರ್ಗ ಜಿಲ್ಲೆ ಅಥವಾ ಇಲ್ಲಿ ಅನುಷ್ಠಾನಗೊಳಿಸುತ್ತಿರುವ ಕುಡಿವ ನೀರು ಯೋಜನೆಗಳು ಕಾರಣವಲ್ಲ.
ಕುಡಿವ ನೀರು ರಾಷ್ಟ್ರೀಯ ಹಕ್ಕು. ಇದು ನಮ್ಮದೇ ಎಂದು ಯಾರೂ ಪ್ರತಿಪಾದಿಸುವಂತಿಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ರೂಪಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ದಾವಣಗೆರೆ ರೈತರು, ರಾಜಕಾರಣಿಗಳು ವಾಸ್ತವಾಂಶ ಅರಿತು ನಡೆದುಕೊಳ್ಳಲಿ. ಪದೇ ಪದೆ ಬಯಲು ಸೀಮೆ ರೈತರನ್ನು ಕೆಣಕುವುದು ಬೇಡ. ಜಲಾಶಯದ ನೀರಿನ ಮೇಲೆ ನೆರೆ ಜಿಲ್ಲೆಗಳ ಜನರ ಹಕ್ಕಿದೆ ಎಂದರು.
ಸರ್ವೋದಯ ಕರ್ನಾಟಕದ ಮುಖಂಡ ಜೆ. ಯಾದವರೆಡ್ಡಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ರೈತರು ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕಿದೆ ಎಂದರು. ಕೆ.ಪಿ.ಭೂತಯ್ಯ, ಕೆ.ಸಿ. ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್‌ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಕೆ.ಆರ್. ದಯಾನಂದ, ಚಿಕ್ಕಪ್ಪನಹಳ್ಳಿ ಷಣ್ಮುಖ, ಬಸವರಾಜಪ್ಪ ಇದ್ದರು.
518 ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಪೂರೈಕೆ
ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ ತರೀಕೆರೆ, ಅಜ್ಜಂಪುರ, ಹೊಸದುರ್ಗ ತಾಲೂಕಿನ 518 ಹಳ್ಳಿಗಳಿಗೆ ಶುದ್ಧ ಕುಡಿವ ನೀರು ಪೂರೈಸಲಾಗುವುದು ಎಂದು ಸಚಿವ ಡಿ. ಸುಧಾಕರ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಇಚ್ಛಾಶಕ್ತಿಯ ಫಲವಾಗಿ ಭದ್ರಾ ಮೇಲ್ದಂಡೆಗೆ ಹೆಚ್ಚು ಅನುದಾನ ಒದಗಿಸಿ, ಕಾಮಗಾರಿಗೆ ವೇಗ ನೀಡಿದ್ದರಿಂದ ಭದ್ರೆ ವಿವಿ ಸಾಗರದ ಒಡಲು ಸೇರಿದೆ. ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದರು. ಅಧಿಕಾರಿಗಳಿಂದ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದರು.
ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ಶ್ರೀನಿವಾಸ್, ಬಿ.ಪಿ. ಹರೀಶ್, ಕಾಡಾ ಅಧ್ಯಕ್ಷ ಅಂಶಿಮಾನ್ ಗೌಡ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಎಸ್ಪಿ ರಂಜಿತ್ ಕುಮಾರ್ ಬಂಡಾರು ಇದ್ದರು.