

ಹನೂರು: ತಾಲೂಕಿನ ನೆಲ್ಲಿಕತ್ರಿ ಗಿರಿಜನರ ಹಾಡಿಗೆ ಭಾನುವಾರ ಸಂಜೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಜನರಿಂದ ಮೂಲಸೌಕರ್ಯ ಸಂಬಂಧ ಸಮಸ್ಯೆ ಆಲಿಸಿ, ಅಗತ್ಯ ಭರವಸೆ ನೀಡಿದರು.
ಈ ವೇಳೆ ಗಿರಿಜನರು ಮಾತನಾಡಿ, ಅರಣ್ಯ ಪ್ರದೇಶದೊಳಗಿರುವ ಈ ಹಾಡಿಯಲ್ಲಿ ಹಲವು ದಶಕಗಳಿಂದಲೂ ವಾಸಿಸುತ್ತಿದ್ದೇವೆ. ಆದರೆ ಸಮರ್ಪಕ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ಸೌಕರ್ಯವಿಲ್ಲ. ಜತೆಗೆ ಕುಟುಂಬದ ಜನಸಂಖ್ಯೆಗೆ ಅನುಗುಣವಾಗಿ ಮನೆಗಳಿಲ್ಲ. ಇದರಿಂದ ಒಂದೊಂದು ಮನೆಯಲ್ಲಿ 2-3 ಕುಟುಂಬಗಳು ವಾಸಿಸುತ್ತಿದ್ದೇವೆ. ಹಾಗಾಗಿ ಮೂಲಸೌಕರ್ಯದಿಂದ ವಂಚಿತರಾಗಿದ್ದು, ಸಮಸ್ಯೆಯ ನಡುವೆಯೇ ಜೀವನ ಸಾಗಿಸುತ್ತಿದ್ದೇವೆ. ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಇತ್ತ ಅಂಗನವಾಡಿ ಕೇಂದ್ರಕ್ಕೆ ಕಟ್ಟಡವಿಲ್ಲದ ಪರಿಣಾಮ ಮಕ್ಕಳಿಗೂ ಸರಿಯಾದ ಸೌಕರ್ಯ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ವರ್ಷಗಳಿಂದಲೂ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಮುತುವರ್ಜಿ ವಹಿಸಿ ಅಗತ್ಯ ಮೂಲಸೌಕರ್ಯವನ್ನು ದೊರಕಿಸಿ ಕೊಡುವುದರ ಮೂಲಕ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ರಸ್ತೆ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ಕೂಡಲೇ ರಸ್ತೆ ನಿರ್ಮಿಸಲಾಗುವುದು. ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೂ ನಲ್ಲಿ ಸಂಪರ್ಕ ಕಲ್ಪಿಸುವುದರ ಮೂಲಕ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ವಸತಿ ಹಾಗೂ ವಿದ್ಯುತ್ ಸೌಕರ್ಯ ದೊರಕಿಸಿ ಕೊಡುವ ಸಂಬಂಧ ಅಗತ್ಯ ಕ್ರಮ ವಹಿಸಲಾಗುವುದು. ಈಗಾಗಲೇ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಅನುಷ್ಠಾನಗೊಳಿಸಲಾಗುವುದು, ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಬಳಿಕ ಜೀರಿಗೆಗದ್ದೆ ಗ್ರಾಮದಲ್ಲಿ ಇತ್ತೀಚೆಗೆ ಹೆಜ್ಜೇನು ದಾಳಿಯಿಂದ ಮೃತಪಟ್ಟಿದ್ದ ಮಾದೇಶ್ ಅವರ ಮನೆಗೆ ಶಾಸಕರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನ ಸಹಾಯ ನೀಡಿದರು.
ಚಾಮುಲ್ ನಿರ್ದೇಶಕ ಮಹದೇವಸ್ವಾಮಿ, ಬೈಲೂರು ಗ್ರಾಪಂ ಸದಸ್ಯ ಮಹದೇವಸ್ವಾಮಿ, ಮುಖಂಡರಾದ ಜಡೇರುದ್ರಸ್ವಾಮಿ, ಗೋಪಾಲ್‌ನಾಯ್ಕ, ವಿಜಯಕುಮಾರ್, ಡಿ.ಕೆ ರಾಜು, ಸಿದ್ದರಾಜು, ಗೋವಿಂದ, ಸೋಮಣ್ಣ ಮತ್ತಿತರರು ಹಾಜರಿದ್ದರು.