

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಮುಖಂಡರಿಂದ ಮಾಹಿತಿ ಪಡೆದರು.
ಪ್ರಾಂಶುಪಾಲ ಆರ್.ಚೇತನ್ ಮಾತನಾಡಿ, ಗ್ರಾಮದ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿದ್ದು, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶ ಹಾಗೂ ಪರೀಕ್ಷಾ ಶುಲ್ಕವನ್ನು ಅಲ್ಲಿಗೆ ಕಟ್ಟಿದ್ದಾರೆ. ಆದರೆ ಮೈಸೂರು ವಿವಿಯು ಕಾಲೇಜಿಗೆ ಅಗತ್ಯವಾದ ಉಪನ್ಯಾಸಕರನ್ನು ನಿಯೋಜಿಸದೆ ಚಾಮರಾಜನಗರ ವಿವಿಗೆ ವರ್ಗಾಯಿಸಿರುವುದಾಗಿ ಹೇಳುತ್ತಿದೆ. ಆದರೆ ಹೊಸ ವಿವಿಯಲ್ಲಿ ಅನುದಾನದ ಕೊರತೆಯಾಗಿದೆ. ಮುಂದಿನ ತಿಂಗಳಲ್ಲಿ ಪರೀಕ್ಷೆ ಬರಲಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಇದರಿಂದ ಹೊಸದಾಗಿ ವಿದ್ಯಾರ್ಥಿಗಳು ದಾಖಲಾಗಲು ಹಿಂಜರಿಯುತ್ತಿದ್ದಾರೆ. ಇದೇ ಪರಿಸ್ಥಿತಿ ಎದುರಾದರೆ ಕಾಲೇಜು ಮುಚ್ಚಬೇಕಾಗುತ್ತದೆ ಎಂದು ಸಮಸ್ಯೆಗಳನ್ನು ವಿವರಿಸಿದರು.
ಕೂಡಲೇ ಗಣೇಶ್ ಪ್ರಸಾದ್ ಮೈಸೂರು ವಿವಿಯ ಪ್ರಸಾರಾಂಗ ವಿಭಾಗದ ಅಧಿಕಾರಿಗಳಿಗೆ ಕರೆಮಾಡಿ ಮಾತನಾಡಿ ಕಾಲೇಜು ಹಸ್ತಾಂತರದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ನಾನು ನಾಳೆಯೇ ಬೆಂಗಳೂರಿಗೆ ತೆರಳಿ ಉನ್ನತ ಶಿಕ್ಷಣ ಸಚಿವರ ಜತೆ ಮಾತನಾಡಿ ಉಪನ್ಯಾಸಕರ ನೇಮಕ, ಪೀಠೋಪಕರಣಗಳು ಹಾಗೂ ಕಂಪ್ಯೂಟರ್‌ಗಳನ್ನು ಒದಗಿಸಲು ಕ್ರಮಕೈಗೊಳ್ಳುವುದಾಗಿ ವಿದ್ಯಾರ್ಥಿಗಳು ಹಾಗೂ ಮುಖಂಡರಿಗೆ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು, ಮಾಜಿ ಅಧ್ಯಕ್ಷ ನಾರಾಯಣನಾಯ್ಕ, ರೈತ ಸಂಘದ ಟಿ.ಎಸ್.ಶಾಂತಮಲ್ಲಪ್ಪ, ಮುಖಂಡರಾದ ಆನಂದನಾಯ್ಕ, ಶ್ರೀನಿವಾಸನಾಯ್ಕ, ಚಿನ್ನಸ್ವಾಮಪ್ಪ, ರಘು, ಸ್ವಾಮಿ, ರಾಮು ಮತ್ತಿತರರಿದ್ದರು.