

ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಕುರಿತು ಕಿಡಿಕಾರಿರುವ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ(ಪಪ್ಪಿ) ವಾರ್ಡನ್ನನ್ನೂ ರೂಮಿನಲ್ಲಿ ಕೂಡಿ ಹಾಕಿ ಚೆನ್ನಾಗಿ ಹೊಡೆಯಿರಿ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಮಾಜ ಕಲ್ಯಾಣ ಇಲಾಖೆಯ ಬಿ.ಇಡಿ, ಕಾನೂನು ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ತಮಗೆ ಕಳಪೆ ಗುಣಮಟ್ಟದ ಆಹಾರ ಪೂರೈಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ವೀರೇಂದ್ರ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಅಹವಾಲುಗಳನ್ನು ಆಲಿಸಿದ್ದರು.
ಈ ವೇಳೆ ಕೆಲ ವಿದ್ಯಾರ್ಥಿಗಳು ಊಟ-ತಿಂಡಿಯಲ್ಲಿ ಕೊಳೆತ ತರಕಾರಿ ಬಳಸಲಾಗುತ್ತಿದೆ, ಅನ್ನದಲ್ಲಿ ಹುಳಗಳೂ ಸಿಗುತ್ತವೆ ಎಂದು ದೂರಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕ ಇನ್ನೊಮ್ಮೆ ಈ ರೀತಿಯಾದರೆ ಅನ್ನದಲ್ಲಿ ಸಿಗುವ ಹುಳಗಳನ್ನೂ ಆರಿಸಿ ತಟ್ಟಯೊಂದರಲ್ಲಿ ಹಾಕಿ ವಾರ್ಡನ್ಗೆ ತಿನ್ನಿಸಿ ರೂಮ್ ಒಂದರಲ್ಲಿ ಕೂಡಿ ಹಾಕಿ ಚೆನ್ನಾಗಿ ಹೊಡೆಯಿರಿ ನಾನಿದ್ದೇನೆ ಎಂದು ಹೇಳಿದ್ಧಾರೆ.
ವಿದ್ಯಾರ್ಥಿಗಳು ಈ ರೀತಿ ಮಾಡದೆ ಇದ್ದರೆ ಹಾಸ್ಟೆಲ್ನ್ ವ್ಯವಸ್ಥೆ ಸರಿ ಹೋಗುವುದಿಲ್ಲ. ಎಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಇವರು ಬುದ್ಧಿ ಕುಲಿಯುವುದಿಲ್ಲ ಎಂದು ಪೊಲೀಸರ ಸಮ್ಮುಖದಲ್ಲೇ ವಿದ್ಯಾರ್ಥಿಗಳನ್ನೂ ಪ್ರಚೋದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ಹುಟ್ಟುಹಾಕಿದ್ದು, ಜನಪ್ರತಿನಿಧಿಯೊಬ್ಬರು ಬಹಿರಂಗವಾಗಿ ಈ ರೀತಿ ಮಾತನಾಡುವುದು ತರವಲ್ಲ ಎಂದು ಕೆಲವರೂ ಆಕ್ಷೇಪಿಸಿದ್ದಾರೆ. ಒಂದು ವೇಳೆ ಶಾಸಕರು ಹೇಳಿದರು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಕಾನೂನು ಕೈಗೆತ್ತಿಕೊಂಡರೆ ಅದರಿಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂದು ಇನ್ನೂ ಕೆಲವರೂ ಪ್ರಶ್ನಿಸಿದ್ದಾರೆ.