

ಮಾಗಡಿ ; ಸೋಲೂರಿನ ಭಾರತ್ ಪೆಟ್ರೋಲಿಯಂ ಕಂಪನಿಯು ಸೌಲಭ್ಯ ನೀಡಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಂಪನಿ ಎದುರು ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶಾಸಕ ಎನ್.ಶ್ರೀನಿವಾಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸೋಲೂರು ಬಳಿ ಬರುವ ಭಾರತ್ ಪೆಟ್ರೋಲಿಯಂ ಕಂಪನಿಗೆ ಜಮೀನು ನೀಡಿದ್ದು ಅದೇ ಕಂಪನಿಯಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೂ ತಾರತಮ್ಯ ಮಾಡುತ್ತಿದ್ದು, ಲಾರಿಗೆ ಸಿಲೆಂಡರ್ ತುಂಬುವ ಕೆಲ ಕಾರ್ಮಿಕರಿಗೆ ದಿನಕ್ಕೆ ೩೫೦ರೂ, ಕೆಲವರಿಗೆ 700 ರೂ ನೀಡುತ್ತಿದ್ದಾರೆ. ಸಮಸ್ಯೆ ಪ್ರಶ್ನೆ ಮಾಡಿದ್ದಕ್ಕೆ ಕೆಲಸದಿಂದ 27 ಕಾರ್ಮಿಕರನ್ನು ತೆಗೆದಿದ್ದು,ಕಾರ್ಮಿಕರಿಗೆ ವೇತನದ ರಶೀದಿ,ಪಿಎಫ್,ಇಎಸ್‌ಐ ಸೇರಿದಂತೆ ಯಾವುದೇ ಸೌಲಭ್ಯ ನೀಡಿಲ್ಲ ಪ್ರಶ್ನೆ ಮಾಡಿದರೆ ಕಾರ್ಮಿಕರ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಆರೋಪಿಸಿ ಕಂಪನಿ ಎದುರು ಕಾರ್ಮಿಕರು ವಾಹನಗಳನ್ನು ಒಳಗೆ ಬಿಡದೆ ಪ್ರತಿಭಟನೆ ಮಾಡಿದ್ದು ವಿವಿಧ ಜಿಲ್ಲೆಗಳಿಂದ ಬಂದ ವಾಹನಗಳು ರಸ್ತೆಯಲ್ಲಿಯೇ ಸ್ಥಗಿತವಾಗಿ ಬಹಳಷ್ಟು ಸಮಸ್ಯೆ ಎದುರಾಗಿತ್ತು.
ನೆಲಮಂಗಲ ಶಾಸಕರು ಕಾರ್ಮಿಕರ ಜತೆ ಭಾಗಿ : ಸ್ಥಳೀಯ ಕಾರ್ಮಿಕರಿಗೆ ನ್ಯಾಯ ಸಿಗುವ ತನಕ ನಾನು ಹೋರಾಟಕ್ಕೆ ಬೆಂಬಲಿಸುತ್ತೇನೆ. ಕಾರ್ಮಿಕರಿಗೆ ತೊಂದರೆ ನೀಡುತ್ತಿರುವ ಹೇಮಂತ್ ಎಂಬ ವ್ಯಕ್ತಿಯ ಬಗ್ಗೆ ಕ್ರಮವಾಗಬೇಕು, ಮೇಲಾಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಮಸ್ಯೆಯನ್ನು ಮನಗಂಡ ಶಾಸಕರು ' ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಕಂಪನಿ ಮುಖ್ಯಸ್ಥರಿಗೆ ಸಮಸ್ಯೆ ಬಗೆಹರಿಸುವಂತೆ ಎಚ್ಚರಿಕೆ ನೀಡಿದರು.
ಪೊಲೀಸರ ಭದ್ರತೆ : ಕಾರ್ಮಿಕರ ಪ್ರತಿಭಟನೆ ಹಿನ್ನಲೆ ನೂರಾರು ಪೊಲೀಸರನ್ನು ಕಂಪನಿಬಳಿ ಬಿಗಿಭದ್ರತೆ ವಹಿಸಿದ್ದರು. ಪ್ರತಿಭಟನೆ ಸ್ಥಳಕ್ಕೆ ರಾಮನಗರ ಎಸ್ಪಿ, ಡಿವೈಎಸ್‌ಪಿ,ಇನ್‌ಸ್ಪೆಕ್ಟರ್ ಸೇರಿದಂತೆ ಅನೇಕ ಪೊಲೀಸರು ಭೇಟಿ ನೀಡಿ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ಸಿಆರ್.ಗೌಡ, ಗ್ರಾ,ಪಂ. ಮಾಜಿ ಅಧ್ಯಕ್ಷ ನಾಗರುದ್ರ ಶರ್ಮ, ವನಜ, ವಕೀಲ ರಾಜಯ್ಯ, ಗಂಗರಂದಗಯ್ಯ ಇತರರು ಇದ್ದರು.