

ಕಾರವಾರ: ವರ್ಷಗಳಿಂದ ಅರೆಬರೆಯಾಗಿ ನಿಂತಿರುವ ನಗರದ Gandhi Market ಗಾಂಧಿ ಮಾರುಕಟ್ಟೆ ತೆರವು ಹಾಗೂ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾರ್ಯವನ್ನು ಸುಗಮವಾಗಿಸಲು ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ. ಶಿಥಿಲವಾಗಿದ್ದ ಗಾಂಧಿ ಮಾರುಕಟ್ಟೆಯಲ್ಲಿದ್ದ 101 ಮಳಿಗೆಗಳನ್ನು ತೆರವು ಮಾಡುವ ಕಾರ್ಯವನ್ನು 2022 ರ ನವೆಂಬರ್‌ನಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಕೆಲವು ಅಂಗಡಿಕಾರರು ಅದನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ತೆರವು ಕಾರ್ಯ ಅರ್ಧಕ್ಕೇ ನಿಂತಿತ್ತು. ನಗರ ನಡುವಿನ ಅತ್ಯಮೂಲ್ಯ ಜಾಗ ಪಾಳು ಕೊಂಪೆಯಂತೆ ಆಗಿತ್ತು.
ಒಟ್ಟಾರೆ ಸುಮಾರು 50 ಅಂಗಡಿಗಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಲ್ಲಿ 20 ಕ್ಕೂ ಅಧಿಕ ಅಂಗಡಿಗಳ ವ್ಯಾಜ್ಯ ನಗರಸಭೆಯ ಪರವಾಗಿ ಆಗಿದೆ. ತೆರವು ಮಾಡಲು ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ. ಕೆಲವರು ಮಾತ್ರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಹಾಗಾಗಿ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲು ಬುಧವಾರ ಅಂಗಡಿಕಾರರ ಸಭೆ ಕರೆಯಲಾಗಿತ್ತು. ಆದರೆ, ಕೆಲವರು ಮಾತ್ರ ಹಾಜರಾಗಿದ್ದರು. ಇದರಿಂದ ಚರ್ಚೆ ಅಪೂರ್ಣವಾಗಿತ್ತು ಎಂದು ಎಂದು ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದ್ದಾರೆ.
ಗುರುವಾರ ಶಾಸಕ ಸತೀಶ ಸೈಲ್, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಚೇರ್ಮನ್ ಮಾಲಾ ಹುಲಸ್ವಾರ್ ಹಾಗೂ ಸದಸ್ಯರು ಅಧಿಕಾರಿಗಳ ಜತೆ ಮಾರುಕಟ್ಟೆಗೆ ತೆರಳಿ Gandhi Market ಅಂಗಡಿಕಾರರ ಜತೆ ಚರ್ಚೆ ನಡೆಸಿದರು.
ಸತೀಶ ಸೈಲ್ ಅಂಗಡಿಕಾರರ ಜತೆ ಮಾತನಾಡಿ, ಅಂಗಡಿಕಾರರು ಸದ್ಯ ಅಂಗಡಿಗಳನ್ನು ತೆರವು ಮಾಡಲು ಒಪ್ಪಿದಲ್ಲಿ ಅಂಥವರಿಗೆ ಮುಂದೆ ನಗರಸಭೆ ನಿರ್ಮಾಣ ಮಾಡುವ ವಾಣಿಜ್ಯ ಸಂಕೀರ್ಣದಲ್ಲಿ ನಿಯಮದಂತೆ ಆದ್ಯತೆಯಲ್ಲಿ ಮಳಿಗೆಗಳನ್ನು ನೀಡಲಾಗುವುದು.
ತಾತ್ಕಾಲಿಕವಾಗಿ ಹಿಂದು ಹೈಸ್ಕೂಲ್, ತರಕಾರಿ ಮಾರುಕಟ್ಟೆ ಮತ್ತು ಮೀನು ಮಾರುಕಟ್ಟೆ ಮಳಿಗೆಯಲ್ಲಿ ಕೆಲವರಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಒಪ್ಪಂದವನ್ನೂ ಮಾಡಿಕೊಡಲಾಗುವುದು.
ಆದರೆ, ತೆರವಿಗೆ ಒಪ್ಪದಿದ್ದರೆ ನಿಯಮದಂತೆ ನೋಟಿಸ್ ಕೊಟ್ಟು ತೆರವು ಮಾಡಲು ಕ್ರಮ ವಹಿಸಲಾಗುವುದು. ನ್ಯಾಯಾಲಯದಲ್ಲಿಯೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ನಗರದ ಅಭಿವೃದ್ಧಿಯಾಗಬೇಕು ಎಂದರೆ ಹೊಸ ಮಾರುಕಟ್ಟೆ ನಿರ್ಮಾಣವಾಗಬೇಕು. ಇದೇ ಗೊಂದಲದಲ್ಲಿ ಹಿಂದೆ ನಗರೋತ್ಥಾನ ಯೋಜನೆಯ 13 ಕೋಟಿ ರೂ.ಅನುದಾನ ವಾಪಸಾಗಿದೆ. ಈಗ ನಗರೋತ್ಥಾನ ಯೋಜನೆಯಡಿ 30 ಕೋಟಿ ಮಂಜೂರಾಗಿದ್ದು, ಆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಮೂರು ಮಹಡಿಗಳ ವಾಣಿಜ್ಯ ಸಂಕೀರ್ಣ Gandhi Market ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದು ವಿವರಿಸಿದರು.